ಕೆಕೆಆರ್‌ಡಿಬಿ ಮೂಲಕ ಕಲಬುರಗಿಗೆ ಹಲವು ಯೋಜನೆಗಳು: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈ ಬಾರಿಯ ಆಯವ್ಯದಲ್ಲಿ ಹಲವಾರು ನೂತನ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಾಲೆಡ್ಜ್ ಪಾರ್ಕ ಸ್ಥಾಪನೆ ಮಾಡಲಾಗುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೈಕ್ರೊ ಅನುದಾನದ ನೆರವಿನೊಂದಿಗೆ ಕಲಬುರಗಿ ಜಿಲ್ಲೆಯ ಆಳಂದ, ಅಫಜಲ್‌ಪುರ, ಚಿತ್ತಾಪುರ, ಯಾದಗಿರಿ, ಜೇವರ್ಗಿ ಪಟ್ಟಣಗಳಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಖರ್ಗೆ ತಿಳಿಸಿದ್ದಾರೆ.
ಹೊಸ ಕೈಗಾರಿಕಾ ನೀತಿ:
ಹೊಸ ಕೈಗಾರಿಕಾ ನೀತಿ 2025-30ರ ಅಡಿ ಪ್ರಪ್ರಥಮ ಬಾರಿಗೆ ಅತಿ ಹಿಂದುಳಿದ ಪ್ರದೇಶಗಳಿಗೆ ಶೇ.5ರಷ್ಟು ಹಾಗೂ ಹಿಂದುಳಿದ ಪ್ರದೇಶಗಳಿಗೆ ಶೇ.3ರಷ್ಟು ಹೆಚ್ಚುವರಿ ಪ್ರೋತ್ಸಾಹವನ್ನು ನೀಡುವ ಮೂಲಕ ಬೆಂಗಳೂರಿನಿಂದಾಚೆಯೂ ಕೈಗಾರಿಕಾಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.
ಇದಕ್ಕೆ ಅನುಗುಣವಾಗಿ ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪಿ.ಎಂ. ಮಿತ್ರ ಮೆಗಾ ಜವಳಿ ಪಾರ್ಕ್‌ನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು 390 ಕೋಟಿ ರೂ.ಗಳನ್ನು ಅನುಮೋದಿಸಿದೆ. ಈ ಯೋಜನೆಗಾಗಿ 2026-27ನೇ ಸಾಲಿಗೆ 75 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ವಾಗ್ಧರಿ- ರಿಬ್ಬನಪಲ್ಲಿ ರಸ್ತೆ ವಿಸ್ತರಣೆ:
400 ಕೋಟಿ ರೂ. ಅಂದಾಜು ಮೊತ್ತದ 135 ಕಿ.ಮೀ. ಉದ್ದದ ವಾಗ್ದಾರಿ-ರಿಬ್ಬನ್‌ಪಲ್ಲಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಕೆ.ಕೆ.ಆರ್.ಡಿ.ಬಿ ವತಿಯಿಂದ ಶೇ.50 ರಷ್ಟು ಅನುದಾನ ಒದಗಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು ಹಾಗೂ ರಾಜ್ಯದ ಒಟ್ಟು ರಾಜ್ಯ ದೇಶಿಯ ಉತ್ಪನ್ನ ( GSDP ) ಗೆ ಕಲ್ಯಾಣ ಕರ್ನಾಟಕದ ಕೊಡುಗೆಯನ್ನು ಹೆಚ್ಚಿಸುವ ಗುರಿಯೊಂದಿಗೆ ವಿವಿಧ ವಲಯಗಳಲ್ಲಿ ನೀತಿಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಈ ಉದ್ದೇಶ ಸಾಧನೆಗಾಗಿ ಪ್ರತ್ಯೇಕ ಯೋಜನೆ, ನೀತಿ ಮತ್ತು ದತ್ತಾಂಶ ವಿಶ್ಲೇಷಣಾ ವಿಭಾಗವನ್ನು ಸ್ಥಾಪಿಸಲಾಗುವುದು ಎಂದೂ ಸಚಿವರು ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ʻಕಲ್ಯಾಣ ಪಥʼ ಯೋಜನೆಯಡಿ 1,000 ಕೋಟಿ ರೂ.ಗಳ ವೆಚ್ಚದಲ್ಲಿ 1,125 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳನ್ನು ತೆಗೆದುಕೊಂಡಿದ್ದು, ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ. ಇದುವರೆಗೆ ಈ ಉದ್ದೇಶಕ್ಕಾಗಿ 238 ಕೋಟಿ ರೂ.ಗಳ ವೆಚ್ಚ ಭರಿಸಿದ್ದು, ಉಳಿಕೆ ಕಾಮಗಾರಿಗಳನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಆಯವ್ಯಯದಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಅರಣ್ಯ ನೀತಿಯಂತೆ ರಾಜ್ಯದ ಶೇ.10 ಕ್ಕಿಂತ ಕಡಿಮೆ ಅರಣ್ಯ ಹೊದಿಕೆ ಹೊಂದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ, 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಕೆಕೆಆರ್ ಡಿಬಿ ವತಿಯಿಂದ 50 ಕೋಟಿ ರೂ. ಸೇರಿದಂತೆ ಒಟ್ಟು 150 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.