ಅಫಜಲಪುರ | ʼಕುವೆಂಪು ವಿಚಾರ ಕ್ರಾಂತಿʼ ಕೃತಿಯ ವಿಚಾರ ಸಂಕಿರಣ
ಕಲಬುರಗಿ: ಭಾರತ ಜ್ಞಾನ ವಿಜ್ಞಾನ ಸಮಿತಿಯು ಅಫಜಲಪುರ ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಿತ "ಕುವೆಂಪು ವಿಚಾರ ಕ್ರಾಂತಿ" ಕೃತಿಯ ಕುರಿತಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಯಿತು.
ವಿಚಾರ ಸಂಕಿರಣದಲ್ಲಿ ಆಶಯ ನುಡಿ ಮಾತನಾಡಿದ ರಾಹುಲ್ ದೊಡ್ಡಮನಿ, ಭಾರತದ ಇತಿಹಾಸದಲ್ಲಿ ವೈಚಾರಿಕ ನೆಲೆಗಳು ಆದಿಯಿಂದಲೂ ಇವೆ. ಅದರಲ್ಲೂ ಕರ್ನಾಟಕದ ನೆಲದಲ್ಲಿ ಪಂಪನಿಂದ ಕುವೆಂಪು ವರೆಗೆ ವೈಚಾರಿಕತೆ ಈ ಸಮಾಜದಲ್ಲಿ ಹಾಸು ಹೊಕ್ಕಾಗಿದೆ. ಅದಕ್ಕೆ ಕಾರಣ ಈ ನಾಡಿನ ಸಾಹಿತ್ಯ ಲೋಕವೇ ಆಗಿದೆ ಎಂದರು.
ಕೃತಿ ಕುರಿತು ಮಾತನಾಡಿದ ಸಿದ್ರಾಮಪ್ಪ ಬಣಗಾರ್, ಕ್ರಾಂತಿಯ ಅರ್ಥ ಬೀದಿಯಲ್ಲಿ ಘೋಷಣೆ ಕೂಗುವುದು, ಬಸ್ಸಿಗೆ ಕಲ್ಲು ಹೊಡೆಯುವುದು ಅಲ್ಲ ಎಂದರು.
ಉಪನ್ಯಾಸಕ್ಕೆ ಪ್ರತಿಕ್ರಿಯೆ ನೀಡಿದ ನಿವೃತ್ತ ಶಿಕ್ಷಕ, ಸಾಹಿತಿ ಅಬ್ಬಾಸ ಅಲಿ ಅವರು, ಪುಸ್ತಕಗಳು ಜ್ಞಾನದ ಜೀವನದಿ. ಕುವೆಂಪು ಅವರ ಕೃತಿಗಳನ್ನು ಕಾಲೇಜು ವಿದ್ಯಾರ್ಥಿಗಳು ಓದಬೇಕು ಇಂಥಹ ಮಹಾನ್ ಲೇಖಕರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದು, ಸ್ವಾಗತಾರ್ಹ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಬೇಕು. ಆ ಪ್ರಜ್ಞೆ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಯುವಕರು ಇಂದು ವೈಚಾರಿಕತೆ ಇಲ್ಲದ ಕಾರಣ ಮೌಢ್ಯತೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಖಜಾಂಚಿ ಸದಾಶಿವ ಮೇತ್ರಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಶಶಿಕಲಾ, ಡಾ.ರಾಜೇಶ, ಕೆ.ನಾರಾಯಣ, ಅಶೋಕ ತಂಬಾಕೆ, ವೀರನಗೌಡ ಪಾಟೀಲ್, ರವಿ ಗೌರ, ರಾಹುಲ್ ಸಿಂಗೇ, ಶರಣ ಗೌಡ್, ಬಸವರಾಜ್ ಕೆಂಗನಾಳ, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.