×
Ad

ಆಳಂದ | 47.50 ಕೋಟಿ ರೂ. ವೆಚ್ಚದ ಸಣ್ಣ ನೀರಾವರಿ ಕಾಮಗಾರಿಗಳಿಗೆ ಸಚಿವ ಭೋಸರಾಜು ಅಡಿಗಲ್ಲು

Update: 2026-03-07 22:20 IST

ಆಳಂದ: ತಾಲೂಕಿನ ರೈತರ ಕೃಷಿಗೆ ನೀರಿನ ಸಿಂಚನ ಒದಗಿಸುವ ಮಹತ್ವದ ಹೆಜ್ಜೆಯಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ 2025–26ನೇ ಸಾಲಿನ 4702 ಎಪಿಬಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಐದು ಪ್ರಮುಖ ಕಾಮಗಾರಿಗಳಿಗೆ ಒಟ್ಟು 47.50 ಕೋಟಿ ರೂ. ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಯೋಜನೆಗೂ ಸುಮಾರು 9.50 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳು ಜಾರಿಗೊಳ್ಳಲಿವೆ ಎಂದರು.

ಈ ಯೋಜನೆಗಳ ಅನುಷ್ಠಾನದಿಂದ ಸುಮಾರು 2,000 ಹೆಕ್ಟೇರ್ ಕೃಷಿಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಮಹತ್ತರ ಉತ್ತೇಜನ ಸಿಗಲಿದೆ ಎಂದು ಸಚಿವರು ತಿಳಿಸಿದರು.

ಯೋಜನೆಯಡಿ ಅಣೆಕಟ್ಟು ನಿರ್ಮಾಣ, ನಾಲೆಗಳ ಅಗೆತ ಹಾಗೂ ನೀರಿನ ಹರಿವು ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಖಂಡಾಳ ಗ್ರಾಮದಿಂದ ಮಟಕಿ ನಾಲೆಯವರೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ, ಬಿಸಿಐಗಳ ನಿರ್ಮಾಣ ಮತ್ತು ನಾಲೆ ಅಗೆತ ಕಾಮಗಾರಿ ನಡೆಯಲಿದೆ. ಇದರಿಂದ ಮಧ್ಯಭಾಗದ ರೈತರಿಗೆ ತಕ್ಷಣದ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.

ಇದೇ ವೇಳೆ ನಿರಗುಡಿ–ಪಡಸಾವಳಿ ನಾಲೆಯವರೆಗೆ ಐಸಿಐಗಳ ನಿರ್ಮಾಣದೊಂದಿಗೆ ನೀರಿನ ಹರಿವು ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಸವಂತವಾಡಿ ಗ್ರಾಮದಿಂದ ನಿಂಬರ್ಗಾ ನಾಲೆಯವರೆಗೆ ಅಣೆಕಟ್ಟು ನಿರ್ಮಾಣದ ಮೂಲಕ ದಕ್ಷಿಣ ಭಾಗದ ರೈತರ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ರೈತರಿಗೆ ನೀರಾವರಿ ದೊರೆತರೆ ಅದಕ್ಕಿಂತ ದೊಡ್ಡ ನೆರವು ಇನ್ನಿಲ್ಲ ಎಂದು ಹೇಳಿದರು.

ಜಿಡಗಾ ಶ್ರೀಮಠದ ಕೆರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 25 ಕೋಟಿ ರೂ. ಅನುದಾನ ಘೋಷಿಸಿರುವುದನ್ನು ಉಲ್ಲೇಖಿಸಿದ ಅವರು, ಅಂತರ್ಜಲ ಮಟ್ಟ ಹೆಚ್ಚಿಸಲು ಇನ್ನೂ 100 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಪಟ್ಟಣದಲ್ಲಿ ರೈತರ ಬೆಳೆ ಸಂರಕ್ಷಣೆಗೆ ಶೀತಗೃಹ (ಕೋಲ್ಡ್ ಸ್ಟೋರೇಜ್) ನಿರ್ಮಿಸಬೇಕು. ಜೊತೆಗೆ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿ ಹಾಗೂ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ 20 ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಹಾಗೂ 30 ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಸಚಿವರು ಹಾಗೂ ಶಾಸಕರು ವಿತರಿಸಿದರು.

ಇಲಾಖೆ ರಾಜ್ಯ ಕಾರ್ಯದರ್ಶಿ ಬಿ.ಕೆ. ಪವಿತ್ರಾ, ಮುಖ್ಯ ಇಂಜಿನಿಯರ್ ಹೆಚ್ ಎಲ್. ವೆಂಕಟೇಶ, ಅಧೀಕ್ಷಕ ಸುಭಾಷ ಎಲ್. ಶಿಕ್ಷಣಕರ್, ಅಭಿಯಂತರ ನಾಗನಗೌಡ ವಾಯ್. ಭಾವಿ ಮತ್ತು ಸಹಾಯಕ ಅಭಿಯಂತರ ಶಾಂತಪ್ಪ ಎಸ್. ಜಾಧವ, ಗುತ್ತಿಗೆದಾರ ಎನ್.ವಿ.ಕುಲಕರ್ಣಿ ಆಗಮಿಸಿದ್ದರು.

ವೇದಿಕೆಯಲ್ಲಿ ಪಂಚಗ್ಯಾರೆoಟಿ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಮೋಹನಗೌಡ ಪಾಟೀಲ, ಹಾಪ್‌ಕಾಮ್ ಅಧ್ಯಕ್ಷ ಗುರುಶಾಂತ ಪಾಟೀಲ ನಿಂಬಾಳ, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ತುಕಾರಾಮ ವಗ್ಗೆ, ಶಂಕರರಾವ್ ದೇಶಮುಖ, ಶರಣು ಭೂಸನೂರ, ಮಲ್ಲಪ್ಪ ಹತ್ತರಕಿ, ರಾಜಶೇಖರ ಪಾಟೀಲ ಚಿತಲಿ, ದಯಾನಂದ ಶೇರಿಕಾರ, ಪಾಶಾ ಗುತ್ತೇದಾರ, ಸುಭಾಷ ಫೌಜಿ, ಇಒ ಮಾನಪ್ಪ ಕಟ್ಟಿಮನಿ, ಡಿವೈಎಸ್‌ಪಿ ತಮರಾಮ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News