×
Ad

Afzalpur | ಭಾರೀ ಮಳೆ-ಬಿರುಗಾಳಿಗೆ ನೆಲಕ್ಕುರುಳಿದ ಸಾವಿರಾರು ಬಾಳೆ ಗಿಡಗಳು

Update: 2026-06-16 20:15 IST

ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಾವಿರಾರು ಬಾಳೆ ಗಿಡಗಳು ನೆಲಕ್ಕುರುಳಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ಘಟನೆ ನಡೆದಿದೆ.

ಗ್ರಾಮದ ರೈತರಾದ ರಜಾಕ್ ಮಹಮ್ಮದ್ ಹನೀಫ್ ದೀವಟಗಿ ಹಾಗೂ ಮಹಮ್ಮದ್ ಹನೀಫ್ ದೀವಟಗಿ ಅವರು ತಲಾ ಎರಡು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಉತ್ತಮ ಇಳುವರಿ ಮತ್ತು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಪ್ರಕೃತಿಯ ವಿಕೋಪ ಭಾರೀ ಹೊಡೆತ ನೀಡಿದೆ.

ಬಿರುಗಾಳಿಯ ತೀವ್ರತೆಗೆ ಸುಮಾರು 5 ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿದ್ದು, ಬೆಳೆ ಬಹುತೇಕ ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಬೆಳೆಗಾಗಿ ಮಾಡಿದ ಹೂಡಿಕೆ ಮರಳಿ ಸಿಗದ ಆತಂಕ ಎದುರಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ತೋಟಗಾರಿಕೆ ಇಲಾಖೆಯ ವಲಯ ಅಧಿಕಾರಿ ಸಕಲೇಶ ಅವರು ಹಾನಿಗೊಳಗಾದ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಹಾಗೂ ರೈತರಿಗೆ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಾಲ-ಸೋಲ ಮಾಡಿ ಬೆಳೆ ಬೆಳೆದಿರುವ ರೈತರು ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಬೆಳೆ ಹಾನಿಯ ಮೌಲ್ಯಮಾಪನ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ಉಂಟಾದ ಈ ನಷ್ಟ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸಂಬಂಧಿತ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ನೆರವಿಗೆ ಧಾವಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News