Kalaburagi | ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ
ಕಲಬುರಗಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆಯಲ್ಲಿನ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ನಿರ್ವಹಿಸಲು ಮತ್ತು ಜಿಲ್ಲಾಧಿಕಾರಿಗಳಿಗೆ ಕಾನೂನಾತ್ಮಕ ಸಲಹೆ ನೀಡಲು ಕಾನೂನು ಸಲಹೆಗಾರರ (ಗುತ್ತಿಗೆ) ಒಂದು ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಸಿವಿಲ್ ನ್ಯಾಯಾಧೀಶರು ಅಥವಾ ಕಾನೂನು ಪದವೀಧರರಾಗಿರುವ (ಎಲ್.ಎಲ್.ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ/ ತಹಶೀಲ್ದಾರ್/ ಉಪ ತಹಶೀಲ್ದಾರ್ ಇವರುಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಕಾನೂನು ಸಲಹೆಗಾರರ ಹುದ್ದೆಗೆ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರು/ ಸಿವಿಲ್ ನ್ಯಾಯಾಧೀಶರು/ ಕಂದಾಯ ಇಲಾಖೆ ನಿವೃತ್ತ ವಿಶೇಷ ಜಿಲ್ಲಾಧಿಕಾರಿಗಳಿಗೆ ಪ್ರತಿ ಮಾಹೆ 70,000 ರೂ. ಗೌರವ ಧನ ನೀಡಲಾಗುತ್ತದೆ.
ಇನ್ನು ಸದರಿ ಹುದ್ದೆಗೆ ಕಾನೂನು ಪದವೀಧರರಾಗಿರುವ (ಎಲ್.ಎಲ್.ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ತಹಶೀಲ್ದಾರ / ಉಪ ತಹಸೀಲ್ದಾರರು ನೆಮಕವಾದಲ್ಲಿ ಇವರಿಗೆ ಪ್ರತಿ ಮಾಹೆ 40,000 ರೂ. ಗೌರವ ಧನ ನೀಡಲಾಗುತ್ತಿದ್ದು, ಆದರೆ ಇವರುಗಳು ಕನಿಷ್ಠ 7 ವರ್ಷ ಸೇವಾನುಭವ ಹೊಂದಿರಬೇಕಿರುವುದು ಕಡ್ಡಾಯವಾಗಿದೆ.
ಅರ್ಹರು ತಮ್ಮ ಅರ್ಜಿಗಳನ್ನು ಜುಲೈ 14ರ ಸಂಜೆ 5 ಗಂಟೆ ಒಳಗಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ತಡವಾಗಿ ಬಂದಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.