×
Ad

Kalaburagi | ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳು ಬೆಳಕು ಚೆಲ್ಲಬೇಕು : ಉಮೇಶ ಜಾಧವ ಆಗ್ರಹ

Update: 2026-06-16 20:10 IST

ಕಲಬುರಗಿ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಈಗ ಫಲಾನುಭವಿಗಳ ಮೇಲೆಯೇ ಆರೋಪ ಹೊರಿಸಿ ಲಕ್ಷಾಂತರ ಜನರನ್ನು ಯೋಜನೆಗಳಿಂದ ಹೊರಗಿಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ್ ಆಕ್ಷೇಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, ಚುನಾವಣಾ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರವೇ ಈಗ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಯೋಜನೆಗಳ ಮಾನದಂಡಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

“ಪ್ರತಿಯೊಬ್ಬ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಲಾಭ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ವಿವಿಧ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಘೋಷಣೆ ಮಾಡಿದ್ದ ಸರ್ಕಾರ ಈಗ ತನ್ನ ಮಾತಿನಿಂದ ಹಿಂದೆ ಸರಿಯುವ ಪ್ರಯತ್ನ ನಡೆಸುತ್ತಿದೆ” ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಕುರಿತು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಡಿತಗೊಳಿಸಲು ವಿವಿಧ ನೆಪಗಳನ್ನು ಹುಡುಕುತ್ತಿದೆ. ಅದರ ಬದಲು ನೈಜ ಆರ್ಥಿಕ ಪರಿಸ್ಥಿತಿಯನ್ನು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಅಲ್ಲಿನ ಸರ್ಕಾರಗಳು ನೌಕರರಿಗೆ ಸಂಬಳ ನೀಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕವೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು.

ಗ್ಯಾರಂಟಿಗಳನ್ನು ಜನರು ಕೇಳಿರಲಿಲ್ಲ. ಕಾಂಗ್ರೆಸ್ ಪಕ್ಷವೇ ಚುನಾವಣಾ ಸಂದರ್ಭದಲ್ಲಿ ಘೋಷಿಸಿತ್ತು. ಈಗ ಫಲಾನುಭವಿಗಳನ್ನೇ ಅನುಮಾನಿಸಿ, ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಖಂಡನೀಯ” ಎಂದು ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News