ಆಳಂದ: ಮಳೆಯಿಂದ ಬೆಳೆ ಹಾನಿ; ಪರಿಹಾರದ ಭರವಸೆ ನೀಡಿದ ಕೃಷಿ ಸಚಿವ
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ವಲಯದಲ್ಲಿ ಅತಿವೃಷ್ಟಿಯಿಂದ ಸಾವಿರಾರು ಎಕರೆ ಬೆಳೆಗಳು ನೀರಿನಲ್ಲಿ ಮುಳುಗಿ, ಕೊಳೆತು ನಾಶವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಬುಧವಾರ ಈ ಪ್ರದೇಶಕ್ಕೆ ಭೇಟಿ ನೀಡಿ, ಹಾನಿಗೊಂಡ ಬೆಳೆಗಳನ್ನು ಪರಿಶೀಲಿಸಿದರು. ರೈತರ ಸಂಕಷ್ಟವನ್ನು ಆಲಿಸಿದ ಸಚಿವರು, ತಕ್ಷಣದ ಪರಿಹಾರಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಆಳಂದ ತಾಲೂಕಿನ ನಿಂಬರಗಾ ಹೋಬಳಿಯ ಕಡಗಂಚಿ ಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಹೆಸರು, ಉದ್ದು, ಸೋಯಾಬೀನ್, ತೊಗರಿ, ಕಬ್ಬು, ಬಾಳೆ ಮತ್ತು ತೋಟಗಾರಿಕೆ ತರಕಾರಿ ಬೆಳೆಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ಫಲವತ್ತಾಗಿ ಬೆಳೆದಿದ್ದ ತೊಗರಿಯ ಬೇರುಗಳು ನೀರಿನಿಂದ ಕೊಳೆತು, ಕೈಗೆ ಬರಬೇಕಿದ್ದ ಬೆಳೆ ನಾಶವಾಗಿದೆ. ಇದರ ಜೊತೆಗೆ, ಜಮೀನುಗಳಲ್ಲಿ ಕಳೆ ಅತಿಯಾಗಿ ಬೆಳೆದು, ಮುಂದಿನ ಹಿಂಗಾರು ಹಂಗಾಮಿನ ಬಿತ್ತನೆಗೆ ಭೂಮಿ ಸಿದ್ಧಪಡಿಸಲು ರೈತರಿಗೆ ತೊಂದರೆಯಾಗಿದೆ. ಈ ದುರಂತವು ರೈತರಿಗೆ ಆರ್ಥಿಕವಾಗಿ ಭಾರೀ ನಷ್ಟವನ್ನು ಉಂಟುಮಾಡಿದೆ ಎಂಬುದು ಸಚಿವರು ಮಾಹಿತಿ ಕಲೆಹಾಕಿ ರೈತರಿಗೆ ಧೈರ್ಯತುಂಬಿ ಸರ್ಕಾರ ರೈತರಿಗೆ ನೆರವಾಗಲಿದೆ ಧೈರ್ಯ ಕಳೆದುಕೊಳ್ಳಬಾರದು ಎಂದು ಹೇಳಿದರು.
ಕೃಷಿ ಸಚಿವರ ಜೊತೆಗೆ ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಶಾಸಕ ಬಿ.ಆರ್. ಪಾಟೀಲ, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
ಶಾಸಕ ಬಿ.ಆರ್. ಪಾಟೀಲ ಅವರು ಸಚಿವರಿಗೆ ಬೆಳೆ ಹಾನಿಯ ಗಂಭೀರತೆಯನ್ನು ವಿವರಿಸಿ, ತಕ್ಷಣದ ಪರಿಹಾರದ ಅಗತ್ಯವನ್ನು ಒತ್ತಾಯಿಸಿದರು. “ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ರೈತರು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಅವರು ಮನವರಿಕೆ ಮಾಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ನೇತೃತ್ವದ ನಿಯೋಗವು ಸಚಿವರಿಗೆ ಮನವಿ ಸಲ್ಲಿಸಿ, ಬೆಳೆ ವಿಮೆ, ಸಾಲ ಮನ್ನಾ, ಮತ್ತು ಹಿಂಗಾರು ಹಂಗಾಮಿಗೆ ಶೇ.90ರಷ್ಟು ರಿಯಾಯಿತಿಯಲ್ಲಿ ಬೀಜ ವಿತರಣೆಯನ್ನು ಒದಗಿಸುವಂತೆ ಒತ್ತಾಯಿಸಿತು. “ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಬೆಳೆ ಹಾನಿ ಪರಿಹಾರವನ್ನು ಕೇಳಬೇಕು. ಇದನ್ನು ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾಗಿ ಜಾರಿಗೊಳಿಸಬೇಕು,” ಎಂದು ಸಿದ್ರಾಮಪ್ಪ ಪಾಟೀಲ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿ ಪಂಡಿತ ಚಿತ್ರಶೇಖರ ಪರಶಿವಪ್ಪಗೊಳ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂಗನೆ, ಹಿರಿಯ ರೈತ ಶಾಮ ನಾಟಿಕಾರ್, ಚಿತಾಪೂರ ಅಧ್ಯಕ್ಷ ಸಂಜುಕುಮಾರ ಪಾಟೀಲ, ಶಿವರಾಜ ಪಾಟೀಲ, ಜೇವರ್ಗಿಯ ಲಿಂಗಯ್ಯಾ ಸ್ವಾಮಿ, ಮತ್ತು ರಾಜಕುಮಾರ ಮೇಲಿನಕೇರಿ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
ಸಚಿವ ಚೆಲುವರಾಯಸ್ವಾಮಿ ಅವರು ಕಡಗಂಚಿಯ ಜೊತೆಗೆ ಕಲಬುರಗಿ ತಾಲೂಕಿನ ಪಟ್ಟಣ ಮತ್ತು ಸರಡಗಿ ಬಿ. ಭಾಗಗಳಲ್ಲಿಯೂ ಬೆಳೆ ಹಾನಿಯನ್ನು ಪರಿಶೀಲಿಸಿದರು. ಅಧಿಕಾರಿಗಳಿಗೆ ಪೂರಕ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಅವರು, “ರೈತರ ಕಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಕಲಬುರಗಿ ಸಹಾಯಕ ನಿರ್ದೇಶಕ ಅರುಣಕುಮಾರ ಮೂಲಿಮನಿ, ಮತ್ತು ಆಳಂದ ಸಹಾಯಕ ನಿರ್ದೇಶಕ ಬನಸಿದ್ಧ ಬಿರಾದಾರ ಅವರು ಸಚಿವರಿಗೆ ಬೆಳೆ ಹಾನಿಯ ತಾಂತ್ರಿಕ ವಿವರಗಳನ್ನು ಒದಗಿಸಿದರು.