Aland | ವಿಶ್ವಕರ್ಮ ಸಮಾಜದ ಸರ್ವತೋಮುಖ ಪ್ರಗತಿಗೆ ಒಗ್ಗಟ್ಟು ಅಗತ್ಯ: ಮುರುಘರಾಜೇಂದ್ರ ಸ್ವಾಮೀಜಿ
ತಾಲೂಕು ವಿಶ್ವಕರ್ಮ ಸಮಾವೇಶ
ಆಳಂದ: ವಿವಿಧ ಧರ್ಮ ಹಾಗೂ ಸಮುದಾಯಗಳ ಜನರೊಂದಿಗೆ ಸಮನ್ವಯ ಮತ್ತು ಸಹಕಾರದ ಮನೋಭಾವದಿಂದ ಜೀವನ ನಡೆಸುವುದು ವಿಶ್ವಕರ್ಮ ಸಮುದಾಯದ ಶ್ರೇಷ್ಠ ಪರಂಪರೆಯಾಗಿದ್ದು, ಸಮಾಜದ ಸರ್ವತೋಮುಖ ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಜಿಡಗಾ–ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಯಲ್ ಪ್ಯಾಲೇಸ್‌ನಲ್ಲಿ ಆಳಂದ ತಾಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ತಾಲೂಕು ವಿಶ್ವಕರ್ಮ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮುದಾಯದ ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಇಂತಹ ಸಮಾವೇಶಗಳು ಪೂರಕವಾಗಿದ್ದು, ಯುವಜನರಿಗೆ ಉತ್ತಮ ಶಿಕ್ಷಣ ಹಾಗೂ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಭಾರತದ ಸಂಸ್ಕೃತಿ, ಕಲೆ, ಶಿಲ್ಪಕಲೆ ಹಾಗೂ ದೇವಸ್ಥಾನಗಳ ಸೌಂದರ್ಯಕ್ಕೆ ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳ ಕೊಡುಗೆ ಅಪಾರವಾಗಿದೆ. ಈ ಶ್ರೀಮಂತ ಪರಂಪರೆ ಹಾಗೂ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.
ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀಶೈಲ ಎಸ್. ಸುತಾರ್ ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ವಕರ್ಮ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಂಘಟಿತರಾಗಬೇಕು. ಯುವಜನರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಪ್ರಗತಿಪರ ರೈತ ಕಲ್ಯಾಣರಾವ ಪಾಟೀಲ ಸಮಾವೇಶ ಉದ್ಘಾಟಿಸಿದರು. ಸರಸಂಬಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುರೇಖಾ ಎನ್. ಸುತಾರ್ ಅಧ್ಯಕ್ಷತೆ ವಹಿಸಿದ್ದರು.
ಅಫಜಲಪುರದ ಬ್ರಹ್ಮಾನಂದ ಸ್ವಾಮೀಜಿ, ಕಲಬುರಗಿಯ ಪ್ರಣವ ನಿರಂಜನ ಸ್ವಾಮೀಜಿ, ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ಯಾದಗಿರಿಯ ಸುರೇಂದ್ರನಾಥ ಸ್ವಾಮೀಜಿ, ಸುಲೇಪೇಟದ ದೊಡ್ಡೇಂದ್ರ ಸ್ವಾಮೀಜಿ, ನಾಗಮೂರ್ತಿ ಸ್ವಾಮೀಜಿ ಹಾಗೂ ಚಿತಲಿಯ ಮೌನೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಸಮಾವೇಶದ ಅಂಗವಾಗಿ ಆಳಂದದ ಕಾಳಿಕಾದೇವಿ ದೇವಸ್ಥಾನದಲ್ಲಿ ಪೂಜಾ ಮಹೋತ್ಸವ ನಡೆಯಿತು. ಬಳಿಕ ವಿಶ್ವಕರ್ಮರ ಕಂಚಿನ ಮೂರ್ತಿಯ ಮೆರವಣಿಗೆಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಕಲೆ ಮತ್ತು ಕರಕುಶಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕುಶಲಕರ್ಮಿಗಳನ್ನು ‘ಕಲಾಚೇತನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ವಿ.ಕೆ. ಸಲಗರದ ಗಂಗಾಧರ ವಿಶ್ವಕರ್ಮ, ದರ್ಗಾಶಿರೂರಿನ ಅಶೋಕ ಸುತಾರ್, ಕಲಬುರಗಿಯ ಗಾಯತ್ರಿ ಚಂದ್ರಶೇಖರ ಶಿಲ್ಪಿ, ತಾಜಸುಲ್ತಾನಪುರದ ರಮೇಶ್ ಬಡಿಗೇರ ಹಾಗೂ ಅಫಜಲಪುರದ ರವಿಕುಮಾರ ಬಡಿಗೇರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು.
ಸಮಾರಂಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ವಿಶ್ವಕರ್ಮ, ವೀರೇಶ ಪೊದ್ದಾರ, ಮಹಾದೇವ ಪೊದ್ದಾರ, ಗುರುಶರಣ ಪಾಟೀಲ, ಬಸವರಾಜ ಪವಾಡಶೆಟ್ಟಿ, ರಮೇಶ ಮಾಡಿಯಾಳಕರ್, ಸಂಜಯ ಪಾಟೀಲ್, ಮೌಲಾ ಮುಲ್ಲಾ, ಕುಪ್ಪಣ್ಣ ನಾಮಣೆ, ಉದ್ಯಮಿ ಶ್ರೀಶೈಲ ಮುನ್ನೋಳ್ಳಿ ಸೇರಿದಂತೆ ಸಮಾಜದ ಪ್ರಮುಖರು, ಮುಖಂಡರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.