×
Ad

ಆಳಂದ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.19ರಿಂದ ಅನಿರ್ದಿಷ್ಠಾವಧಿ ಧರಣಿ : ಮೌಲಾ ಮುಲ್ಲಾ

Update: 2026-01-16 18:34 IST

ಆಳಂದ: ತಾಲೂಕಿನ ತಡೋಳಾ ಗ್ರಾಮದಲ್ಲಿ ಜಾರಿಗೊಳಿಸಿದ ಪ್ರಧಾನ ಮಂತ್ರಿ ಜಲ ಸಿಂಚಾಯಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ತೊಗರಿಗೆ ಪ್ರತಿಕ್ವಿಂಟಾಲಿಗೆ 10 ಸಾವಿರ ರೂ. ಬೆಲೆ ನೀಡಿ ಖರೀದಿಸಬೇಕು ಎಂದು ಆಗ್ರಹಿಸಿ ಜ.19ರಿಂದ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕದ ಆಶ್ರಯದಲ್ಲಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಕಚೇರಿಯ ಮುಂದೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಹೇಳಿದರು.

ಪಟ್ಟಣದಲ್ಲಿ ಗುರುಭವನ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಗಳಿಂದ ಪ್ರಧಾನ ಮಂತ್ರಿ ಜಲ ಸಂಚಯ ಯೋಜನೆಯಡಿಯಲ್ಲಿ ತಡೋಳಾ ಗ್ರಾಮದಲ್ಲಿ ನಡೆದಿರುವ ಕಾಮಗಾರಿಯನ್ನು ಪೂರ್ಣಗೊಳಿಸುವುದು ಹಾಗೂ ತೊಗರಿಗೆ ಸಹಾಯಧನ ನೀಡುವುದು ಸೇರಿದಂತೆ ರೈತರ ಹಲವು ಬೇಡಿಕೆಗಳ ಕುರಿತು ಒತ್ತಾಯಿಸಿ ನಿರಂತರ ಧರಣಿ ನಡೆಸಲಾಗುವುದು ಎಂದರು.

2021-22ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಜಲ ಸಿಂಚಾಯಿ ಯೋಜನೆಯಡಿಯಲ್ಲಿ ನಿಗದಿತ ಕಾಮಗಾರಿಗಳು ಇದುವರೆಗೂ ಪೂರ್ಣಗೊಳ್ಳದಿರುವುದು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಯೋಜನೆಯಲ್ಲಿ ಬಂದಿರುವ ಅನೇಕ ಕೃಷಿ ಉಪಕರಣಗಳನ್ನು ರೈತರಿಗೆ ಹಂಚಲಾಗದ ಕಾರಣಗಳು ಕಾಲಹರಣಕ್ಕೆ ಒಳಗಾಗಿವೆ ಎಂದು ಮೌಲಾ ಅವರು ಆರೋಪಿಸಿದರು.

ಅಲ್ಲದೆ, ತಡೋಳಾ ಪಂಚಾಯಿತಿಗೆ ಸಂಬಂಧವಿಲ್ಲದಂತೆ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಪಂಚಾಯತ್‌ ಅನುಷ್ಠಾನ ಸಮಿತಿ ಪುನರಚನೆ ಮಾಡಿ ಕ್ರಿಯಾಶೀಲತೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಕಲಬುರಗಿ ಜಿಲ್ಲೆಯ ತೊಗರಿ ಖನಿಜವಾಗಿದ್ದರೂ, ಪ್ರತಿ ಕ್ವಿಂಟಾಲ್‌ಗೆ 8,000 ರೂ. ಬೆಲೆ ಇದ್ದರೂ ಮಾರುಕಟ್ಟೆಯಲ್ಲಿ 7,000 ರೂ. ಗೆ ಮಾತ್ರ ಮಾರಾಟವಾಗುತ್ತಿದೆ. ಇನ್ನು ಇದುವರೆಗೆ ಖರೀದಿ ಕೇಂದ್ರಗಳು ಪ್ರಾರಂಭವಾಗಿಲ್ಲ. ಸರ್ಕಾರವು 8,000 ರೂ. ನಿಗದಿಪಡಿಸಿದ್ದರೂ ಸೂಕ್ತ ಬೆಲೆ ಇಲ್ಲದ ಕಾರಣ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಕ್ವಿಂಟಾಲಿಗೆ 1,000 ರೂ. ಸಹಾಯಧನ ನೀಡಬೇಕು ಮತ್ತು ಸಹಾಯ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ 10 ಸಾವಿರ ರೂ. ಬೆಲೆಯಲ್ಲಿ ತೊಗರಿಯನ್ನು ಖರೀದಿಸಬೇಕು ಎಂದು ಮೌಲಾ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಿಸಾನಸಭಾ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಿ ಅವುಟೆ, ತಾಲೂಕು ಉಪಾಧ್ಯಕ್ಷ ರಾಜಶೇಖರ ಬಸ್ಮೆ ಹಿರೋಳಿ, ಆರೀಫ್ ಅಲಿ ಲಂಗಡೆ, ರಮೇಶ ಹತ್ತಿಗಾಳೆ, ಯಲ್ಲಪ್ಪ ಬಿ. ಯಾದವ, ಮಹಾದೇವ ಪೂಜಾರಿ, ಮೈಲಾರಿ ಜೋಗೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News