×
Ad

ಆಳಂದ| ಅಮರ್ಜಾ ಅಣೆಕಟ್ಟೆ ಸೇರಿ 37 ಕೆರೆಗಳು ಭರ್ತಿ, ರೈತರ ಬೆಳೆ ಜಲಾವೃತ : ಜನಜೀವನ ಅಸ್ತವ್ಯಸ್ತ

Update: 2025-08-19 19:06 IST

ಕಲಬುರಗಿ: ವಾರದಿಂದ ಆಳಂದ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ಭಾಗಗಳಲ್ಲಿ ನಿರಂತರ ಜಿಟಿಜಿಟಿ ತುಂತುರು ಮಳೆಯೊಂದಿಗೆ ಧಾರಾಕಾರ ಮಳೆಯ ಆರ್ಭಟ ಮುಂದುವರಿದಿದ್ದು,  ಇದರ ಪರಿಣಾಮವಾಗಿ ಅಮರ್ಜಾ ಅಣೆಕಟ್ಟೆ ಸೇರಿದಂತೆ ಆಳಂದ ತಾಲೂಕಿನ 37 ಕೆರೆಗಳು ಭರ್ತಿಯಾಗಿ ಹರಿಯಲು ಆರಂಭಿಸಿದರೆ, ಮತ್ತೊಂದೆಡೆ ರೈತರ ಕೈಗೆ ಬಂದ ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ.

ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು, ಅಲ್ಲಲ್ಲಿ ಮನೆಗಳು ಕುಸಿದು, ವ್ಯಾಪಾರ ವಹಿವಾಟು ಕುಂಠಿತಗೊಂಡು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ತುಂಬಿ ಹರಿಯುತ್ತಿರುವ ಕೆರೆ :

ಸಾಲೇಗಾಂವ್ ಮತ್ತು ಆಳಂದ ಕೆರೆಗಳು ವೇಸ್ಟ್ವೇರ್‌ನಿಂದ ನೀರು ಹರಿಯಲಾರಂಭಿಸಿದ್ದು, ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ನಿಂತು ಬೆಳೆ ಹಾನಿಯ ಆತಂಕ ಹೆಚ್ಚಿದೆ. 18 ಕಾಲುವೆ ಕೆರೆಗಳು ಹಾಗೂ 17 ಜಿನುಗು ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಹಳ್ಳ-ಹರಿವುಗಳೆಲ್ಲಾ ಪ್ರಚಂಡವಾಗಿ ಹರಿಯುತ್ತಿವೆ. ತೋಟಗಾರಿಕೆ ಇಲಾಖೆ ಪ್ರಕಾರ ಇನ್ನೂ ತೋಟಗಾರಿಕಾ ಬೆಳೆಗಳು ಹಾನಿಯಾಗದಿದ್ದರೂ, ಮಳೆಯ ಅಬ್ಬರ ಮುಂದುವರಿದರೆ ಅವುಗಳಿಗೂ ತೀವ್ರ ಹಾನಿ ಸಂಭವಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೊಗರಿ, ಉದ್ದು, ಹೆಸರು ಸೇರಿದಂತೆ ಬಹುತೇಕ ಬೆಳೆಗೆ ನೀರು ನುಗ್ಗಿದ್ದು, ರೈತರು ಬೆಳೆ ಕೊಳೆತುಹೋಗುವ ಭಯದಲ್ಲಿ ಇದ್ದಾರೆ. “ಮಳೆ ನಿಂತ ನಂತರವೇ ನಿಜವಾದ ಹಾನಿಯ ಅಂದಾಜು ಸಾಧ್ಯ, ಆದರೆ ಈಗಲೇ ಹೆಚ್ಚಿನ ಹಾನಿ ಖಚಿತ” ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆ ಕುಸಿತ – ಜನರಲ್ಲಿ ಆತಂಕ :

ಯಳಸಂಗಿ, ಸರಸಂಬಾ, ವೈಜಾಪೂರ, ಜವಳಿ, ಲಿಂಗದಳ್ಳಿ ಹಾಗೂ ಸಾವಳೇಶ್ವರ ಸೇರಿ ಹಲವು ಗ್ರಾಮಗಳಲ್ಲಿ ಹಳೆಯ ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಕೆಲವು ಗ್ರಾಮಗಳಲ್ಲಿ ನೀರು ಮನೆಗಳಿಗೆ ನುಗ್ಗಿದ್ದು, ಜನರ ಜೀವನ ಅಸ್ತವ್ಯವಸ್ಥವಾಗಿದೆ. “ಮನೆಯ ಗೋಡೆ ಕುಸಿದು ಒಳಗಿನ ಸಾಮಾನು ನಾಶವಾಯಿತು, ಈಗ ಎಲ್ಲಿ ವಾಸಿಸಬೇಕು ಎಂಬ ಆತಂಕದಲ್ಲಿ ಇದ್ದೇವೆ” ಎಂದು ಅಲ್ಲಿನ ನಿವಾಸಿಗಳು ಕಣ್ಣೀರು ಸುರಿಸಿದ್ದಾರೆ.

ಅಮರ್ಜಾ ಅಣೆಕಟ್ಟೆಯ ಸಾಮರ್ಥ್ಯ 1.555 ಟಿಎಂಸಿ ಇದ್ದು, ಈಗಾಗಲೇ 1.450 ಟಿಎಂಸಿ ತುಂಬಿರುವುದರಿಂದ ಅಗತ್ಯಕ್ಕೆ ಅನುಗುಣವಾಗಿ ಗೇಟ್‌ಗಳನ್ನು ಎತ್ತಿ ನೀರು ಬಿಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ಸಾಧ್ಯತೆ ಇದ್ದು, ನದಿ ದಡದಲ್ಲಿನ ಜನ ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅಣೆಕಟ್ಟೆಯ ಒಳಭಾಗದಲ್ಲಿ ನೀರು ಉಕ್ಕಿ ಆಳಂದ ಪಂಪ್‌ಹೌಸ್‌ಗೆ ನುಗ್ಗಿದ್ದರಿಂದ ಪೈಪ್‌ಲೈನ್ ಸೋರಿಕೆಯಾದರೂ ತುರ್ತು ಕ್ರಮ ಕೈಗೊಂಡು ಮರುಜೋಡಣೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಹೇಳಿದ್ದಾರೆ.

ಮಕ್ಕಳ ಶಿಕ್ಷಣಕ್ಕೂ ತೊಡಕು :

ಗ್ರಾಮಾಂತರ ರಸ್ತೆಗಳು ಕೆಸರುಮಯವಾಗಿದ್ದು, ನೀರು ನಿಂತಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಹೆದರಿದ್ದು, ಕೆಲವು ಗ್ರಾಮಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ.

“ಮಳೆಯಿಂದ ಉಂಟಾದ ಸಂಕಷ್ಟ ನಿವಾರಣೆಗೆ ಆಡಳಿತ ಸ್ಪಂದಿಸಬೇಕು. ರಸ್ತೆ ದುರಸ್ತಿ, ಚರಂಡಿ ಸ್ವಚ್ಛತೆ, ಕೆರೆ ನಿರ್ವಹಣೆ ತಕ್ಷಣ ಕೈಗೊಳ್ಳಬೇಕಿದೆ” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ಮಳೆಯ ಸವಿನೆನಪು ನೀಡಿದ ನೀರಿನ ತುಂಬು, ಜನಜೀವನಕ್ಕೆ ದುಃಖದ ಬಿರುಗಾಳಿ ತರಿಸಿದೆ. ರೈತರಿಗೆ ಬೆಳೆ ಹಾನಿ, ವ್ಯಾಪಾರ ಕುಸಿತ, ಮನೆ ಕುಸಿತ, ಸಂಚಾರ ತೊಂದರೆ – ಎಲ್ಲವೂ ಒಂದೇ ವೇಳೆ ಎದುರಾಗಿದ್ದು, ತಕ್ಷಣದ ಪರಿಹಾರ ಕ್ರಮ ಅಗತ್ಯವಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News