×
Ad

ಆಳಂದ | ರೈತರ ಸಾಲಮನ್ನಾ ಜೊತೆಗೆ ಪ್ರತಿ ಎಕರೆಗೆ 35,000 ರೂ. ಪರಿಹಾರ ನೀಡಿ: ನಾಗರಾಜ ಶೇಗಜಿ

Update: 2025-09-24 22:59 IST

ಕಲಬುರಗಿ: ಕಳೆದ ಒಂದು ತಿಂಗಳಿಂದ ಆಳಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರೈತರ ಹೊಲಗಳು, ಬೆಳೆಗಳು, ರಸ್ತೆ ಮತ್ತು ಮನೆಗಳು ತೀವ್ರ ಹಾನಿಗೊಳಗಾಗಿವೆ ಇದಕ್ಕೆ ಸಾಲಮನ್ನಾ ಮತ್ತು ಪರಿಹಾರವೇ ದಾರಿಯಾಗಿದೆ ಎಂದು ಆಳಂದ ತಾಲೂಕಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ ಧಂಗಾಪೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲ್ಲೂಕಿನ ಜೀವನಾಡಿ ಅಮರ್ಜಾ ಅಣೆಕಟ್ಟು ಸಂಪೂರ್ಣವಾಗಿ ತುಂಬಿ ನೀರು ಬಿಡುವುದರಿಂದ ಭೂಸನೂರ, ಧಂಗಾಪೂರ, ಕೋರಳ್ಳಿ, ದೇವಂತಗಿ, ಜವಳಿ ಡಿ, ಬಟ್ಟರ್ಗಾ, ಹಿತ್ತಲಶಿರೂರ ಮತ್ತು ಕುಡಕಿ ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿವೆ ಎಂದು ಹೇಳಿದ್ದಾರೆ.

ಪ್ರಮುಖ ಬೆಳೆಗಳಾದ ಕಬ್ಬು, ತೊಗರಿ, ಉದ್ದು, ಸೋಯಾಬೀನ್, ಬಾಳೆಹಣ್ಣು, ಕಾಯಿಪಲ್ಲೆ ಸಂಪೂರ್ಣ ನಾಶವಾಗಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಮನೆಗಳು ಹಾಗೂ ಸಂಪರ್ಕ ರಸ್ತೆಗಳು, ಸೇತುವೆಗಳು ಹಾನಿಗೊಳಗಾಗಿದ್ದು, ಗ್ರಾಮಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.

ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪ್ರತಿ ಎಕರೆಗೆ ಸೂಕ್ತ ಪರಿಹಾರ ಘೋಷಿಸಬೇಕು. ಬೆಳೆ ಸಾಲ ಮನ್ನಾ ಮಾಡಿ, ಹೊಸ ಬೆಳೆ ಬೆಳೆಸಲು ಬಿತ್ತನೆ ಬೀಜ ಮತ್ತು ರಸಗೊಬ್ಬರ ಉಚಿತವಾಗಿ ನೀಡಬೇಕು. ಹಾನಿಗೊಳಗಾದ ಮನೆಗಳಿಗೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಗ್ರಾಮಾಂತರ ರಸ್ತೆಗಳು ಮತ್ತು ಸೇತುವೆಗಳ ತ್ವರಿತ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಪ್ರವಾಹ ಪೀಡಿತರಿಗೆ ತಕ್ಷಣವೇ ತಾತ್ಕಾಲಿಕ ಆಶ್ರಯ, ಆಹಾರ ಮತ್ತು ವೈದ್ಯಕೀಯ ಸಹಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂದಿನ ಪರಿಸ್ಥಿತಿಯಲ್ಲಿ ರೈತರು ತಮ್ಮ ಬದುಕು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ರೈತರ ಸಾಲ ಮನ್ನಾ ಮಾಡಿ ಅದರ ಜೊತೆಗೆ ಪ್ರತಿ ಎಕರೆಗೆ 35,000 ರೂ. ಪರಿಹಾರ ಘೋಷಿಸದಿದ್ದರೆ, ನಾವು ರೈತ ಸಮುದಾಯದೊಂದಿಗೆ ಕಠಿಣ ಹೋರಾಟ ನಡೆಸುತ್ತೇವೆ. ರೈತರ ಕಣ್ಣೀರನ್ನು ಒರೆಸುವುದು ಸರ್ಕಾರದ ಮೊದಲ ಕರ್ತವ್ಯವಾಗಲಿ ಎಂದು ನಾಗರಾಜ ಶೇಗಜಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News