ಆಳಂದ | ಗ್ರಾಪಂಗಳಲ್ಲಿನ ವಾಸ್ತವ್ಯ ಅರಿತು ಸಮಸ್ಯೆ ನಿವಾರಣೆಗೆ ಇಓ ಕಟ್ಟಿಮನಿ ಸೂಚನೆ
ಕಲಬುರಗಿ: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರಸ್ಥಾನಕ್ಕೆ ತೆರಳಿ ವಾಸ್ತವ್ಯ ಅರಿತು ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು ಎಂದು ಆಳಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆಳಂದ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯತ್‌ಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಹತ್ವದ ಸೂಚನೆಗಳನ್ನು ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸರಬರಾಜು, ಶೌಚಾಲಯ ನಿರ್ಮಾಣ, ತೆರಿಗೆ ಸಂಗ್ರಹಣೆ, ವಿದ್ಯುತ್ ಶುಲ್ಕ ಪಾವತಿ, ಶಾಲೆಗಳ ದಾಖಲಾತಿ ಮತ್ತು ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ಆಲಿಸಿದರು.
ಅಲ್ಲದೆ ಸಭೆಯಲ್ಲಿ ಹಾಜರಿದ್ದ ಸಿಬ್ಬಂದಿಗಳಿಗೆ ಗ್ರಾಮ ಪಂಚಾಯತ್‌ಗಳು ತಮಗೆ ನಿಗದಿಪಡಿಸಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ವಿಳಂಬವಾದ ಕಾಮಗಾರಿಗಳಿಗೆ ಕಾರಣಗಳನ್ನು ಗುರುತಿಸಿ, ತಕ್ಷಣ ಪರಿಹಾರ ಕಂಡುಕೊಳ್ಳಲು ಅವರು ಸೂಚಿಸಿದರು.
ಪ್ರತಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕನಿಷ್ಠ 40 ಲೀಟರ್ ದೈನಂದಿನ ನೀರು ಸರಬರಾಜು ಖಾತರಿಪಡಿಸುವಂತೆ ಮತ್ತು ವೈಯಕ್ತಿಕ ಹಾಗೂ ಸಾಮುದಾಯಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಹಿಂದೇಟು ಹಾಕಬಾರದು. ಗ್ರಾಪಂಗಳ ಆದಾಯ ವೃದ್ಧಿಗಾಗಿ ತೆರಿಗೆ, ಶುಲ್ಕ ಮತ್ತು ದರಗಳ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಗ್ರಾಮ ಸಭೆಗಳನ್ನು ನಿಯಮಿತವಾಗಿ ಆಯೋಜಿಸಿ, ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವಂತೆ ಮಾಡಿ ಅರ್ಹ ಫಲಾನುಭವಿಗಳ ಆಯ್ಕೆಯಾಗಬೇಕು ಇದರಿಂದ ಯೋಜನೆಗಳ ಯಶಸ್ಸಿಗೆ ಸ್ಥಳೀಯರ ಸಹಕಾರ ದೊರೆಯುತ್ತದೆ ಎಂದರು.
ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗಳು ಸೇರಿದಂತೆ ರುದ್ರವಾಡಿ ಪಿಡಿಒ ಬಸವರಾಜ ಮಲಶೆಟ್ಟಿ, ಮುನ್ನೊಳ್ಳಿ ಪಿಡಿಓ ನಾಗೇಶ ಮೂರ್ತಿ, ನರೇಗಾ ವಿನೋಧ ಕಲಕೇರಿ, ದಣ್ಣೂರ, ಸುಂಟನೂರ ಪಿಡಿಓ ಪ್ರವೀಣ ಉಡಗಿ, ಭೂಸನೂರ ಪಿಡಿಒ ಧರ್ಮಣ್ಣಾ, ಮಾಡಿಯಾಳ ಪಿಡಿಓ ಶಿವಾನಂದ ಮಾನಿಂಗ, ಉಷಾ ಪಾಟೀಲ, ಸುಕನ್ಯ ಇತರರು ಇದ್ದರು ಅಲ್ಲದೆ ಕೆಲವು ಪಿಡಿಓಗಳ ಗೈರು ಹಾಜರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಇಓ ಸೂಚನೆ ನೀಡಿದರು.