×
Ad

ಆಳಂದ | ಕನ್ನಡ ಮಾಧ್ಯಮ ಶಾಲೆಗಳಿಗೆ ಸರಕಾರ ಸಹಾಯಹಸ್ತ ನೀಡಲಿ: ಬಾಬುರಾವ ಸುಳ್ಳದ

Update: 2025-07-10 19:48 IST

ಕಲಬುರಗಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನೇಕ ವರ್ಷಗಳಿಂದ ಸರ್ಕಾರದ ಸಹಾಯಧನವಿಲ್ಲದೇ ಕನ್ನಡ ಶಾಲೆಗಳನ್ನು ನಡೆಸಿಕೊಂಡು ಬಂದು ಕನ್ನಡವನ್ನು ಉಳಿಸುವ ಕಾರ್ಯ ಮಾಡಿರುವ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಸರ್ಕಾರ ಸೂಕ್ತ ಸಹಾಯ ನೀಡಲಿ ಎಂದು ಬೋಧಿಸತ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಾಬುರಾವ ಸುಳ್ಳದ ಆಗ್ರಹಿಸಿದರು.

ಗುರುವಾರ ಆಳಂದ ತಹಶೀಲ್ದಾರ್‌ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಾಲೂಕು ಘಟಕ, ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಶಾಲೆಗಳು ಮುಚ್ಚುತ್ತಿವೆ ಇದಕ್ಕೆ ಕಾರಣ ಸರ್ಕಾರದ ಕಠಿಣ ನಿಯಮಗಳು ಅಲ್ಲದೇ 1995ರಿಂದ ಅನುದಾನ ನೀಡದೇ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಇಂದು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಅತ್ಯಂತ ಶೋಚನಿಯ ಸ್ಥಿತಿಯಲ್ಲಿ ಶಾಲೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

1995ರಿಂದ ಆರಂಭವಾದ ಕನ್ನಡ ಶಾಲೆಗಳನ್ನು ವೇತನ ಅನುದಾನಕ್ಕೆ ಒಳಪಡಿಸಬೇಕು. ಆರ್‌ಟಿಇ ಮರು ಜಾರಿ ಮಾಡಬೇಕು. ಖಾಸಗಿ ಶಾಲಾ ಶಿಕ್ಷಕರಿಗೂ ಸರ್ಕಾರಿ ತರಬೇತಿ, ಪ್ರಶಸ್ತಿ ಪುರಸ್ಕಾರ, ಪಠ್ಯಪುಸ್ತಕ, ಹಾಲು, ಹಣ್ಣು, ಬಿಸಿಯೂಟ, ಸಮವಸ್ತ್ರ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಧರಣಿಯಲ್ಲಿ ವಿವಿಧ ಶಾಲೆಗಳ ಆಡಳಿತ ಮಂಡಳಿಯ ಅಧ್ಯಕ್ಷರುಗಳಾದ ಬಸಯ್ಯ ಗುತ್ತೇದಾರ, ಅರುಣಕುಮಾರ ಪೋಚಾಲ, ಶಿವಲಿಂಗ ತೇಲ್ಕರ, ಮಲ್ಲಿಕಾರ್ಜುನ ಮಾಳಿ, ಗುರುಶರಣ ಬಿರಾದಾರ, ವಿಜಯಕುಮಾರ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಅಪ್ಪಾಸಾಬ ಬಿರಾದಾರ, ಕಲ್ಯಾಣಿ ಸಾವಳಗಿ, ಮಲ್ಲಿನಾಥ ತುಕ್ಕಾಣೆ, ಪರಶುರಾಮ ಪೂಜಾರಿ, ರೂಪಚಂದ ಮಂಡ್ಲೆ ಸೇರಿದಂತೆ ವಿವಿಧ ಶಾಲೆಗಳ ಸದಸ್ಯರು, ಸಿಬ್ಬಂದಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

ಧರಣಿ ಆರಂಭಕ್ಕೂ ಮುನ್ನ ಆಳಂದ ಪಟ್ಟಣದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News