ಆಳಂದ | ಮನೆ ಕಳವು ಪ್ರಕರಣ : ಇಬ್ಬರು ಮಹಿಳೆಯರ ಬಂಧನ
Update: 2025-07-18 22:25 IST
ಕಲಬುರಗಿ: ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಜು.15ರಂದು ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ 51,600 ರೂ. ಮೌಲ್ಯದ ಕಳವಾದ ಆಭರಣ ಮತ್ತು ನಗದು ವಶಕ್ಕೆ ಪಡೆಯುವಲ್ಲಿ ಅಳಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಳಂದನ ವಡ್ಡರಗಲ್ಲಿಯ ಲಕ್ಷ್ಮೀಬಾಯಿ ರಮೇಶ್ ಗೊಲ್ಲರ್ (35), ವಾಟರ್ ಟ್ಯಾಂಕ್ ಹತ್ತಿರ ನಿವಾಸಿ ಭಾರತಿ ಗೋವಿಂದ ಸಾವ್ಳೆ (25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಡಕಲ್ ಗ್ರಾಮ ನಿವಾಸಿ ಸುನೀತಾ ಮಲ್ಲಿಕಾರ್ಜುನ ಜಮಾದಾರ ಅವರು ತಮ್ಮ ಮನೆಯಲ್ಲಿ ಅಪರಿಚಿತ ಕಳ್ಳರು ನುಗ್ಗಿ ಬಂಗಾರ-ಬೆಳ್ಳಿ ಆಭರಣಗಳು, ನಗದು ಕಳವು ಮಾಡಿದ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆಗೆ ತನಿಖೆ ನಡೆಸಿದ ಆಳಂದ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ, ಅವರ ಬಳಿಯಿದ್ದ ಬಂಗಾರ ಮತ್ತು ನಗದು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.