×
Ad

ಆಳಂದ | ಗಡಿ ಅಪರಾಧ ನಿಯಂತ್ರಣಕ್ಕೆ ಕರ್ನಾಟಕ–ಮಹಾರಾಷ್ಟ್ರ ಪೊಲೀಸರ ಸಂಯುಕ್ತ ಸಭೆ

ಪರಸ್ಪರ ಸಹಕಾರದಿಂದ ಮಾತ್ರ ಅಪರಾಧಿಗಳಿಗೆ ಕಡಿವಾಣ: ಎಸ್‌ಪಿ ಅಡ್ಡೂರು ಶ್ರೀನಿವಾಸಲು

Update: 2025-12-29 18:41 IST

ಆಳಂದ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಮಹಾರಾಷ್ಟ್ರದ ಉಮರಗಾ, ಅಕ್ಕಲಕೋಟ ಮತ್ತು ಮುರುಮ ತಾಲೂಕುಗಳ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ, ಗಡಿ ಭಾಗದಲ್ಲಿ ನಡೆದ ಅಪರಾಧ ಪ್ರಕರಣಗಳ ಅಂಕಿ-ಅಂಶಗಳನ್ನು ಪರಸ್ಪರ ಹಂಚಿಕೊಂಡು ಚರ್ಚಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು, ಗಡಿ ಪ್ರದೇಶಗಳಲ್ಲಿ ಅಪರಾಧಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತಪ್ಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದನ್ನು ತಡೆಯಲು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಪೊಲೀಸ್ ಇಲಾಖೆಗಳ ನಡುವೆ ನಿರಂತರ ಮಾಹಿತಿ ವಿನಿಮಯ, ತಕ್ಷಣದ ಸಂಯುಕ್ತ ಕಾರ್ಯಾಚರಣೆ ಮತ್ತು ಪರಸ್ಪರ ಸಹಕಾರ ಅತ್ಯಗತ್ಯ. ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜ್ಯ ಒಂಟಿಯಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕಳ್ಳತನ, ಕೊಲೆ, ಸುಲಿಗೆ, ಅಕ್ರಮ ಹಣ ವಸೂಲಿ, ಮಾದಕ ವಸ್ತುಗಳ ಸಾಗಣೆ ಸೇರಿದಂತೆ ಗಡಿ ಭಾಗದಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧ ಪ್ರಕರಣಗಳ ಪತ್ತೆ ಮತ್ತು ನಿಯಂತ್ರಣಕ್ಕೆ ಸಂಬoಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು. ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿ ಹಂಚಿಕೆ, ರಾತ್ರಿ ಗಸ್ತು ವ್ಯವಸ್ಥೆ ಬಲಪಡಿಸುವುದು, ತ್ವರಿತ ತನಿಖೆ, ತಂತ್ರಜ್ಞಾನ ಬಳಕೆಯ ಮೂಲಕ ಅಪರಾಧ ತಡೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಗುರುತು ಪತ್ತೆಯಾಗದ ಶವಗಳ ಪ್ರಕರಣಗಳು, ಅಂತರರಾಜ್ಯ ಕಳ್ಳರು, ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಪರಸ್ಪರ ಸಹಕಾರದೊಂದಿಗೆ ಪತ್ತೆಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ ಅಂತರರಾಜ್ಯ ವಾರೆಂಟ್‌ಗಳು ಸರ್ವ್ ಆಗದಿರುವ ಪ್ರಕರಣಗಳ ಕುರಿತು ಹಾಗೂ ಅಪರಾಧಿಗಳ ಪತ್ತೆಗೆ ಸಂಯುಕ್ತ ಕ್ರಮ ಕೈಗೊಳ್ಳುವ ಬಗ್ಗೆ ಒಮ್ಮತ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೆಘಣ್ಣನವರು, ಗಡಿ ಪ್ರದೇಶಗಳಲ್ಲಿ ನಡೆಯುವ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿ ಸಂಯುಕ್ತ ಕಾರ್ಯಾಚರಣೆಗಳ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸಭೆಯ ಅಂತ್ಯದಲ್ಲಿ ಗಡಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಸಂಯುಕ್ತ ಸಭೆಗಳನ್ನು ನಿರಂತರವಾಗಿ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ಸಭೆಯ ಪ್ರಸ್ತಾವಿಕ ಭಾಷಣವನ್ನು ಆಳಂದ–ಅಫಜಲಪೂರ ಉಪವಿಭಾಗದ ಡಿವೈಎಸ್‌ಪಿ ತಮ್ಮರಾಯ ಆರ್. ಪಾಟೀಲ ಮಾಡಿದರು.

ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಸ್ವಾಗತಿಸಿದರು. ನಿಂಬರಗಾ ಪ್ರಭಾರಿ ಪಿಎಸ್‌ಐ ಸಂಗಮೇಶ ಅಂಗಡಿ ನಿರೂಪಿಸಿದರು. ನರೋಣಾ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ಧರಾಮ ನಿಂಬರಗಿ ವಂದನಾರ್ಪಣೆ ಸಲ್ಲಿಸಿದರು.

ಸಭೆಯಲ್ಲಿ ಕಲಬುರಗಿ ಗ್ರಾಮೀಣ ಡಿವೈಎಸ್‌ಪಿ ಎನ್.ಲೋಕೇಶ್ವರಪ್ಪ, ಉಮರಗಾ ಡಿವೈಎಸ್‌ಪಿ ಸದಾಶಿವ ಶೆಲ್ಲಾರ, ಪಿಐ ಶ್ರೀಕಾಂತ ಭರತೆ, ರೇವೂರ ಠಾಣೆಯ ಪಿಎಸ್‌ಐ ವಾತ್ಸಲ್ಯ, ಅಕ್ಕಲಕೋಟ ನಾರ್ತ್ ಪಿಐ ದೀಪಕ ಬಿಟಡೆ, ಸೌತ್ ಪಿಐ ಸುರೇಶ ಚಿನ್ನವರ, ಬಸವಕಲ್ಯಾಣ ಸಿಪಿಐ ಅಲಿಸಾಬ್ ಚೌದ್ರಿ, ಸಿಂದಗಿ ವ್ಯಾಪ್ತಿ ಸಿಪಿಐ ನಾನಾಗೌಡ್ರು, ಕಲಬುರಗಿ ಗ್ರಾಮೀಣ ಸಿಪಿಐ ಶಿವಶಂಕರ ಸಾಹು, ಕಲಬುರಗಿ ನಗರ ಸಿಪಿಐ ಭೋಜರಾಜ ರಾಠೋಡ, ಉಮರಗಾ ಸಿಪಿಐ ಪ್ರಲ್ಹಾದ ಸೂರ್ಯವಂಶಿ, ಮುರುಮ ಎಪಿಐ ಸಂದೀಪ ದೈಹಿಪಾಯಿ, ನಿಂಬರಗಾ ಠಾಣೆ ಪಿಎಸ್‌ಐ ಇಂದುಮತಿ, ದೇವಲಗಾಣಗಾಪುರ ಕ್ರೈಂ ಪಿಎಸ್‌ಐ ಶ್ರೀದೇವಿ, ಮಾದನಹಿಪ್ಪರಗಾ ಕ್ರೈಂ ಪಿಎಸ್‌ಐ ಶಿವಾನಂದ, ಅಫಜಲಪೂರ ಪಿಎಸ್‌ಐ ಸೋಮಲಿಂಗ ವಡೆಯರ್, ಸಿಯುಕೆ ಅಧಿಕಾರಿ ಬಸವರಾಜ, ಗಣಪತಿ ಘಂಟೆ, ಆಳಂದ ಠಾಣೆಯ ಮಹಿಬೂಬ ಶೇಖ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಠಾಣೆಗಳ ಅನೇಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News