ಆಳಂದ | ಸಾವಳೇಶ್ವರದಲ್ಲಿ ಬೀದಿ ನಾಟಕದ ಮೂಲಕ ಜನಜಾಗೃತಿ
ಕಲಬುರಗಿ: ಆಳಂದ ತಾಲೂಕಿನ ಸರಸಂಬಾ ವಲಯದ ಸಾವಳೇಶ್ವರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಲಪ್ಪ ಝಳಕಿ ಹಾಗೂ ಊರಿನ ಹಿರಿಯ ಶರಣಪ್ಪ ಪಾಟೀಲ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿಯವರು ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶಕ್ತಿಯಾಗಿ ನಿಂತಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಜೊತೆಗೆ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಈ ಬೀದಿ ನಾಟಕದಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿಯ ಜೊತೆಗೆ ಸಕಾರಾತ್ಮಕ ಬದಲಾವಣೆ ತರುವ ಗುರಿಯನ್ನು ಹೊಂದಿವೆ," ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶೃತಿ ಸಂಸ್ಕೃತಿಕ ಕಲಾತಂಡದವರು ಜ್ಞಾನವಿಕಾಸ ಕಾರ್ಯಕ್ರಮಗಳು, ಸುಜ್ಞಾನನಿಧಿ ಶಿಷ್ಯವೇತನ, ವಾತ್ಸಲ್ಯ ಕಾರ್ಯಕ್ರಮಗಳು, ಗ್ರಾಮ ಸ್ವಚ್ಛತೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಶಿಕ್ಷಣ ಮತ್ತು ಶೌಚಾಲಯ ಬಳಕೆಯ ಕುರಿತು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ರೇಣುಕಾ ಹಿರೇಕುಡಿ, ವಲಯದ ಮೇಲ್ವಿಚಾರಕರಾದ ವಿರೇಶ, ನೂಡಲ್ ಅಧಿಕಾರಿ ಬಸವರಾಜ, ವಲಯದ ಸೇವಾ ಪ್ರತಿನಿಧಿ ಅವಮ್ಮ, ಸುವಿದ ಸಹಾಯಕಿ ಪ್ರೀತಿ, ಕೇಂದ್ರದ ಸದಸ್ಯರು, ಊರಿನ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.