ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆ ಬಗ್ಗೆ ಚರ್ಚೆಯಾಗಲಿ : ಲಕ್ಷ್ಮಣ್ ದಸ್ತಿ ಒತ್ತಾಯ
ಕಲಬುರಗಿ : ಇಂದಿನಿಂದ (ಡಿ.8) ಹತ್ತು ದಿನಗಳ ಕಾಲ ನಡೆಯುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಮಾತ್ರ ಸೀಮಿತವಾಗಲಿ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ.
ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ, ಕೃಷ್ಣಾ ಕಣಿವೆ ಪ್ರದೇಶದ ಮತ್ತು ಗೋದಾವರಿ ಕಣಿವೆ ಪ್ರದೇಶದ ನೀರಾವರಿ ಯೋಜನೆಗಳ ಬಗ್ಗೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ,371ನೇ(ಜೇ) ಕಲಂ ಅಡಿ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ ನೀತಿ, ಈ ಹಿಂದೆ ಘೋಷಣೆಯಾದ ಯೋಜನೆಗಳ ಅನುಷ್ಠಾನ, ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಅಭಿವೃದ್ಧಿ ಬಗ್ಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸುವ ಬಗ್ಗೆ, ಕಲಬುರಗಿ ವಿಮಾನಗಳ ಸಂಚಾರ ಸ್ಥಗಿತಗೊಂಡ ಸಮಸ್ಯೆ, ಕಾರಂಜಾ ರೈತ ಸಂತ್ರಸ್ತರಿಗೆ ಪರಿಹಾರ ಹಣ ವಿತರಣೆ ಸಮಸ್ಯೆ, ಕಲ್ಯಾಣ ಕರ್ನಾಟಕದ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ರೈಲ್ವೆ ಮಾರ್ಗಗಳು, ರಸ್ತೆ ನಿರ್ಮಾಣಗಳು ಸಮಾರೋಪಾದಿಯಲ್ಲಿ ಕಾಮಗಾರಿ ನಡೆಸುವ ಬಗ್ಗೆ, ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿದ ವಿಷಯ, ಕಲ್ಯಾಣ ಕರ್ನಾಟಕದಲ್ಲಿ ಎಸೆಸೆಲ್ಸಿ, ಪಿಯುಸಿ ಫಲಿತಾಂಶದ ಸುಧಾರಣೆ ಬಗ್ಗೆ, ಶಿಕ್ಷಕರ ನೇಮಕಾತಿ ಸೇರಿದಂತೆ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಸಮಸ್ಯೆಗಳು,ವಿವಿಗಳ ಅಭಿವೃದ್ಧಿ ಜೊತೆಗೆ ಖಾಲಿ ಹುದ್ದೆಗಳ ನೇಮಕಾತಿ, ಪ್ರವಾಸೋದ್ಯಮ ಅಭಿವೃದ್ಧಿ, ಆಸ್ಪತ್ರೆಗಳ ಅವ್ಯವಸ್ಥೆ,ಹೀಗೆ ಉತ್ತರ ಕರ್ನಾಟಕದ ಎಲ್ಲಾ ರಂಗಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ದಿಟ್ಟ ನಿರ್ಧಾರಗಳು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅದರಂತೆ ಮಾನ್ಯ ಸಭಾ ಅಧ್ಯಕ್ಷರು ಮತ್ತು ಮಾನ್ಯ ಸಭಾಪತಿಗಳು ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗೆ ಮಾತ್ರ ಅವಕಾಶ ನೀಡಬೇಕು, ಬೇರೆ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.