×
Ad

ಬಿಜೆಪಿಯ ಮತಗಳ್ಳತನದ ಷಡ್ಯಂತ್ರ ಶೀಘ್ರವೇ ಬಹಿರಂಗ : ಸಚಿವ ಪ್ರಿಯಾಂಕ್ ಖರ್ಗೆ

Update: 2025-11-01 20:50 IST

ಕಲಬುರಗಿ: ಇನ್ನೂ ಕೆಲವೇ ದಿನಗಳಲ್ಲಿ ಮತಗಳ್ಳತನದ ಕುರಿತಂತೆ ಬಿಜೆಪಿಯ ಪ್ರಜಾತಂತ್ರ ಹಾಗೂ ಸಂವಿಧಾನದ ವಿರುದ್ಧದ ಷಡ್ಯಂತ್ರ ಜನರ ಮುಂದೆ ತನಿಖೆಯಿಂದ ಬಹಿರಂಗವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆಳಂದ ಪಟ್ಟಣದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ನಡೆದ 225 ಕೋಟಿ ರೂ. ಬೆಳೆವಿಮೆ ದೊರಕಿಸಿಕೊಟ್ಟ ಸರಕಾರದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನದ ಆರೋಪ ಮಾಡಿದ್ದರು. ಆದರೆ, ಬಿ.ಆರ್.ಪಾಟೀಲ್ ಅವರು ಮತಗಳ್ಳತನ ಕುರಿತಂತೆ ದಾಖಲೆ ಸಮೇತ ಸಾಬೀತುಪಡಿಸಿದ ನಂತರ ಮತಗಳ್ಳತನದ ಪ್ರಕರಣಕ್ಕೆ ತಿರುವುಪಡೆದುಕೊಂಡಿತು ಎಂದರು.

ಮತಗಳ್ಳತನದ ವಿರುದ್ದ ಸಂವಿಧಾನ ಉಳಿಸುವುದಕ್ಕಾಗಿ ಬಿ.ಆರ್.ಪಾಟೀಲ್ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಹಾಗೂ ಆಶೀರ್ವಾದ ಇರಬೇಕು. ಕೇವಲ ಅವರಿಗಷ್ಟೇ ಅಲ್ಲದೇ ನನ್ನ ಮೇಲೂ ಇರಬೇಕು ಎಂದು ಪ್ರಿಯಾಂಕ್ ಕೇಳಿಕೊಂಡರು.

ಜಿಲ್ಲೆಯ 4 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ :

ಕಲಬುರಗಿ ಜಿಲ್ಲೆಯ ನಾಲ್ಕು ಲಕ್ಷಕ್ಕೂ ಅಧಿಕ ರೈತರಿಗೆ 650 ಕೋಟಿ ರೂ. ಬೆಳೆವಿಮೆ ಪರಿಹಾರ ಸಿಕ್ಕಿದೆ. ಬಹುಶಃ ಇದು ರಾಜ್ಯದಲ್ಲೇ ಅತ್ಯಧಿಕ ಬೆಳೆವಿಮೆ ಪರಿಹಾರವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಸಾಲಿನಲ್ಲಿ (2025-26) ಸುಮಾರು 3,00,952 ಜನ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನೆಟೆರೋಗದಿಂದ ತೊಗರಿ ಹಾನಿಯಾಗಿದ್ದಾಗ ನಯಾಪೈಸೆ ಪರಿಹಾರ ದೊರಕಿಸಿಕೊಡಲಿಲ್ಲ. ಆಗಲೂ ತೀವ್ರ ಮಳೆಯಿಂದ ಬೆಳೆ ಹಾನಿಯಾಗಿದ್ದವು ಆಗ ಸಿಎಂ ಆಗಿದ್ದ ಯಡಿಯೂರಪ್ಪ ವಿಮಾನ ನಿಲ್ದಾಣದಿಂದಲೇ ವಾಪಸ್ ಹೋಗಿದ್ದರು ಎಂದು ಅಂದಿನ ಸನ್ನಿವೇಶ ನೆನಪಿಸಿದರು.

ಈ ಸಲವೂ ಕೂಡಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಬೆಳೆ ಹಾನಿಯಾಗಿವೆ.‌ ಸಿಎಂ ಸಿದ್ದರಾಮಯ್ಯ ಇಡೀ ದಿನ ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಿ, ಜನಪ್ರತಿನಿಧಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎನ್ ಡಿ ಆರ್ ಎಫ್ ನಿಮಯಾವಳಿ ಪ್ರಕಾರ ಕೇಂದ್ರ ಕೊಡುವ ಪರಿಹಾರಕ್ಕೆ 8,500 ರೂ ಪ್ರತಿ ಹೆಕ್ಟೇರ್ ಗೆ ಸೇರಿಸಿ ಕೊಡುವ ವಾಗ್ಧಾನ ಮಾಡಿದರು ಎಂದರು.

ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಆರ್ಥಿಕ‌ ಸ್ಥಿತಿಗತಿ ಸುಧಾರಿಸಿದೆ ಎಂದ ಪ್ರಿಯಾಂಕ್ ಖರ್ಗೆ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಕೇವಲ ಕಾಂಗ್ರೆಸ್ ನವರು ಪಡೆಯುತ್ತಿಲ್ಲ, ಬಿಜೆಪಿಯವರೂ ಪಡೆಯುತ್ತಿದ್ದಾರೆ. ಆದರೂ ಯೋಜನೆಗಳನ್ನು ಟೀಕಿಸುತ್ತಾರೆ, ಸ್ವಲ್ಪನಾದರೂ ನಾಚಿಕೆ ಪಡಬೇಕು ಎಂದು ಕುಟುಕಿದರು.

ಆರ್ಟಿಕಲ್ 371 ಜೆ ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ವಾರ್ಷಿಕ ರೂ 5,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ.‌ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಮುಖ ಯೋಜನೆಗಳನ್ನು ಜಿಲ್ಲೆಗೆ ತಂದಿದೆ. ಇಎಸ್ ಐಸಿ, ಜಯದೇವದಂತಹ ಪ್ರಮುಖ ಆಸ್ಪತ್ರೆಗಳು, ಕೇಂದ್ರಿಯ ವಿವಿಯಂತ ಶೈಕ್ಷಣಿಕ ಕೇಂದ್ರಗಳ ಸ್ಥಾಪನೆ ಮಾಡಿದ್ದು, ಕಾಂಗ್ರೆಸ್ ಪಕ್ಷ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಟೀಕೆ ಮಾಡಿದರೆ ಸ್ವಾಗತ. ಆದರೆ, ರಾಜಕೀಯ ಸಲುವಾಗಿ ಅನಗತ್ಯ ಟೀಕೆ ಹಾಗೂ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಲ್ಯಾಣ ಪಥ ಹಾಗೂ ಪ್ರಗತಿ ಪಥ ಯೋಜನೆಯಡಿಯಲ್ಲಿ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. ಪ್ರಗತಿಪಥ ಯೋಜನೆಯಡಿಯಲ್ಲಿ ಸುಮಾರು 8,257 ಕಿಮಿ ದೂರದ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಾಗಿದೆ ಎಂದರು.

ಆಳಂದ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ತಕ್ಷಣ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು, ರೈತರಿಗೆ ಇನ್ನೂ ಹೆಚ್ಚಿನ‌ ಪರಿಹಾರ ನೀಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಿಮ್ಮ ಯೋಗಕ್ಷೇಮ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ರೈತರು ಬದುಕಬೇಕೆಂದರೆ ಅವರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು. ದೇಶದಲ್ಲಿ ಭಾರೀ ಮಟ್ಟದಲ್ಲಿ ರೈತರು ಹೋರಾಟ ನಡೆಸಿದರು. ಹೋರಾಟ ಮಾಡುತ್ತಲೇ ಬಹಳಷ್ಟು ರೈತರು ಪ್ರಾಣ ಕಳೆದುಕೊಂಡರು. ಆದರೆ, ಪ್ರಧಾನಿ ಕನಿಷ್ಠ ಸಂತಾಪ ಸೂಚಿಸಲಿಲ್ಲ ಎಂದು ವಿಷಾದಿಸಿದರು.

ಕೇಂದ್ರ ಸರ್ಕಾರದಿಂದ ಮಹಾರಾಷ್ಟ್ರಕ್ಕೆ 1.30 ಲಕ್ಷ ಕೋಟಿ ರೂ. ಪರಿಹಾರ ನೀಡಿದ್ದು, ನಮಗೆ ಕೇವಲ 40,000 ಕೋಟಿ ರೂ. ಪರಿಹಾರ ನೀಡಲಾಗಿದೆ. ಈ ಅನ್ಯಾಯದ ವಿರುದ್ದ ಹೋರಾಟ ಮಾಡಬೇಕಾಗಿದೆ. ಆಳಂದ ಪಟ್ಟಣಕ್ಕೆ ಅಮೃತ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ 60 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.

ವೇದಿಕೆಯ ಮೇಲೆ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಎಸ್ಪಿ ಶ್ರೀನಿವಾಸಲು ಅಡ್ಡೂರು, ಸಿಇಓ ಭಂವರ್ ಸಿಂಗ್ ಮೀನಾ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News