ಮಂತ್ರಿಗಿರಿ ಪಡೆಯಲು ಬಿಆರ್ ಪಾಟೀಲ್ ರಿಂದ ಮತಗಳ್ಳತನದ ಸುಳ್ಳು ಆರೋಪ: ಸುಭಾಷ್ ಗುತ್ತೇದಾರ್
ಕಲಬುರಗಿ: ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹತ್ತಿರವಾಗುವ ನೆಪಕ್ಕಾಗಿ ನನ್ನ ಮೇಲೆ ಮತಗಳ್ಳತನದ ಸುಳ್ಳು ಆರೋಪಗಳನ್ನು ಹಾಲಿ ಶಾಸಕ ಬಿ.ಆರ್ ಪಾಟೀಲ್ ಮಾಡುತ್ತಿದ್ದಾರೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಆರ್ ಪಾಟೀಲ್, ಈ ಹಿಂದೆ ನಾನು 23 ಕೊಲೆಗಳನ್ನು ಮಾಡಿದ್ದೇನೆ ಎಂದು ಆಪಾದನೆ ಮಾಡಿದ್ದರು. ಆದರೆ ಕೊನೆಗೂ ಅದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸತ್ಯ ಬಯಲಿಗೆ ಬಂದಿದೆ. ಹೀಗೆ ಅವರು ತಮ್ಮ ಹೈಕಮಾಂಡ್ ಅನ್ನು ಮೆಚ್ಚಿಸಲು ಹಾಗೂ ಸಚಿವ ಸ್ಥಾನ ಪಡೆಯಲು ಇಷ್ಟೆಲ್ಲ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಗುತ್ತೇದಾರ್ ಆರೋಪಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಆಳಂದ ಪಟ್ಟಣದಲ್ಲಿರುವ ಮನೆಯನ್ನು ಕೆಲಸದವರು ಸ್ವಚ್ಛಗೊಳಿಸಿದ್ದಾರೆ. ಬೇಡವಾದ ಕಾಗದ ಪತ್ರಗಳನ್ನು ಸುಟ್ಟುಹಾಕಿದ್ದಾರೆ. ನಾನೊಬ್ಬ ರಾಜಕಾರಣಿಯಾಗಿದ್ದರಿಂದ ಮನೆಯಲ್ಲಿ ಮತದಾರರ ಪಟ್ಟಿ, ಕರಪತ್ರಗಳೂ ಇರಬಾರದಾ? ಎಂದು ಪ್ರಶ್ನಿಸಿದ ಅವರು, ಸಾಕ್ಷಿಗಳನ್ನು ನಾಶ ಮಾಡುವುದಾದರೆ ಯಾರಾದ್ರೂ ಮನೆ ಮುಂದೆ ಸುಡುತ್ತಾರಾ? ಒಂದು ವೇಳೆ ಇಂತಹ ಮತಕಳ್ಳತನದಲ್ಲಿ ತೊಡಗಿದ್ದೇ ಆದರೆ ಸಾಕ್ಷಿಗಳನ್ನು ನಾಶಪಡಿಸಲು ದೂರದ ಸ್ಥಳದಲ್ಲಿ ಹೋಗಿ ನಾಶ ಮಾಡುತ್ತಿದ್ದರು ಎಂದರು.
ಧ್ವಜವಂದನೆ ಮಾಡದ ಶಾಸಕ ಬಿ.ಆರ್ ಪಾಟೀಲ್:
ಆಳಂದ ಮತಕ್ಷೇತ್ರದಲ್ಲಿ ಇವರೆಗೆ ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಇಂತಹ ಸುಳ್ಳು ಆಪಾದನೆ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಲಿ ಶಾಸಕರು ಮುಂದಾಗುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಬಂದರೆ ಇವರು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ದೆಹಲಿಗೆ ಹೋಗಿದ್ದರು. ಇತ್ತ ವಿಮೋಚನೆ ದಿನದಂದು ಧ್ವಜ ವಂದನೆ ಸ್ವೀಕಾರ ಮಾಡಿಲ್ಲ ಎಂದು ಸುಭಾಷ್ ಗುತ್ತೇದಾರ್, ಶಾಸಕರ ವಿರುದ್ಧ ಹರಿಹಾಯ್ದರು.
ಮತಗಳ್ಳತನದ ಆರೋಪವಿರುವ ಕಾರಣಕ್ಕೆ ತನಿಖೆಗಾಗಿ ಸಂಪೂರ್ಣ ಸಹಕರಿಸುವೆ, ಒಂದು ವೇಳೆ ಜೈಲಿಗೆ ಹೋದರೂ ಪರವಾಗಿಲ್ಲ. ನ್ಯಾಯಕ್ಕಾಗಿ ಕೋರ್ಟ್ ಗೆ ಹೋಗುವೆ. ಖಂಡಿತ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಗುತ್ತೇದಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಉಮೇಶ್ ಜಾಧವ್, ಅವಿನಾಶ್ ಜಾಧವ್, ಬಸವರಾಜ ಮತ್ತಿಮಡು, ಚಂದು ಪಾಟೀಲ್, ಅಶೋಕ್ ಬಗಲಿ, ಲಿಂಗರಾಜ ಬಿರಾದಾರ, ಮಲ್ಲಿಕಾರ್ಜುನ್ ಕಂದಗೊಳೆ, ಸಂತೋಷ್ ಹಾದಿಮನಿ ಮತ್ತಿತರು ಇದ್ದರು.