ಡಿ.15ರಂದು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ: ಶಾಸಕ ಬಿ.ಆರ್.ಪಾಟೀಲ್
ಕಲಬುರಗಿ: ರಾಜ್ಯದಲ್ಲಿ ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ದಿ ಯೋಜನೆ ರೂಪಿಸಲು ವಿವಿಧ ಹಂತಗಳ ಪ್ರಕ್ರಿಯೆ ಮುಗಿದ ನಂತರ ಡಿ.15 ರೊಳಗೆ ಯೋಜನಾ ಆಯೋಗದಿಂದ ಸರಕಾರಕ್ಕೆ ದೂರದೃಷ್ಟಿ ಯೋಜನೆ-2031ರ ಅನುಗುಣವಾಗಿ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಮೊದಲನೇ ಹಂತವಾಗಿ ಇದೇ ಮಾಹೆಯಲ್ಲಿ ಇಲಾಖಾವಾರು ಮಾಹಿತಿ ಸಂಗ್ರಹಣೆ ಮತ್ತು ವಾಸ್ತವ ಸ್ಥಿತಿಯ ವಿಶ್ಲೇಷಣೆ ಮಾಡುವುದು ಅಗತ್ಯವಾಗಿದೆ ಎಂದರು.
ನಂತರ ಎರಡನೇ ಹಂತದಲ್ಲಿ 15ನೇ ಆಗಸ್ಟ್ ರೊಳಗಾಗಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಾರ್ಡ್ ಮತ್ತು ಗ್ರಾಮವಾರು ಸಭೆ, 3ನೇ ಮತ್ತು 4ನೇ ಹಂತದಲ್ಲಿ ಕ್ರಮವಾಗಿ ಗ್ರಾಮ ಪಂಚಾಯತ್ ಸಭೆ ಮತ್ತು ತಾಲೂಕು ಪಂಚಾಯತ್-ಪೌರ ಸಂಸ್ಥೆಗಳ ಸಭೆಗಳನ್ನು ಸೆ.15ರೊಳಗೆ ಹಾಗೂ 5ನೇ ಹಂತದಲ್ಲಿ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ನಡೆಸಿ ತಾಲೂಕಿನ ಸಮಗ್ರ ವರದಿ ಸಿದ್ದಪಡಿಸಬೇಕು. ನಂತರ ಸೆ.30ರೊಳಗೆ 6ನೇ ಹಂತದಲ್ಲಿ ಜಿಲ್ಲಾ ಪಂಚಾಯತ್ ಸಭೆ, 7ನೇ ಹಂತವಾಗಿ ಅ.10 ರೊಳಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಕರೆಯಬೇಕು ಎಂದರು.
ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು 20ನೇ ಅಕ್ಟೋಬರ್ ನೊಳಗೆ, ಕೊನೆಯದಾಗಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ನ.30 ರೊಳಗೆ ಸಭೆ ನಡೆಸಿ ಅಂತಿವಾಗಿ ಡಿ.15ಕ್ಕೆ ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಳ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಹಂತದಲ್ಲಿನ ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಸಮಿತಿಗಳಿಗೆ ಸಲ್ಲಿಸಬೇಕು. ಈ ಪ್ರಕ್ರಿಯೆ ತ್ವರಿತವಾಗಿ ಅಂದುಕೊಂಡಂತೆ ಡಿಸೆಂಬರ್ ಒಳಗೆ ಸರ್ಕಾರಕ್ಕೆ ಪಂಚ ವಾರ್ಷಿಕ ಯೋಜನೆಯ ವರದಿ ಸಲ್ಲಿಸಿದಲ್ಲಿ ಮುಂದಿನ ಆಯವ್ಯಯದಲ್ಲಿ ಯೋಜನೆ ರೂಪಿಸಲು ಸಹಾಯವಾಗಲಿದೆ. ಈ ಕುರಿತು ಸಿ.ಎಂ. ಅವರು ಕಾಲಮಿತಿಯಲ್ಲಿಯೇ ವರದಿ ಸಲ್ಲಿಸಲು ತಮಗೆ ಸೂಚನೆ ನೀಡಿದ್ದಾರೆ ಎಂದರು.
ತಾವು ಅಧಿಕಾರ ವಹಿಸಿದ ನಂತರ ನಾಲ್ಕು ಬಾರಿ ಯೋಜನಾ ಆಯೋಗದ ಸಭೆ ನಡೆಸಿದ್ದೇನೆ. ವಿಭಾಗವಾರು ಸಭೆ ಕಲಬುರಗಿ ಮೊದಲನೇಯದಾಗಿದೆ ಎಂದ ಅವರು, ಕೆಕೆಆರ್‌ಡಿಬಿ ಮಂಡಳಿ ಇರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನುದಾನ ಕೊರತೆ ಇಲ್ಲ. ನಿರ್ದಿಷ್ಟ ಯೋಜನೆಗೆ ಕಾರ್ಯಕ್ರಮ ರೂಪಿಸಬಹುದಾಗಿದೆ ಎಂದರು.
ಅಪೂರ್ಣ ಯೋಜನೆ ತಪ್ಪಿಸಿ, ಸುಸ್ಥಿರ ಅಭಿವೃದ್ಧಿಗೆ ಯೋಜನೆ ರೂಪಿಸಿ :
ಶಾಸನ ಸಭೆಯು ನೀತಿ ನಿರೂಪಿಸಿ ಬಿಡುತ್ತದೆ. ವಾಸ್ತವಾಗಿ ಕಾರ್ಯಕ್ರಮಗಳಿಗೆ ಅನುದಾನ ಸೇರಿ ನಾನಾ ಕಾರಣದಿಂದ ನಿರೀಕ್ಷಿತ ಮಟ್ಟದಲ್ಲಿ ಅದು ಕಾರ್ಯಸಾಧ್ಯವಾಗುವುದಿಲ್ಲ. ಇನ್ನು ಅಗತ್ಯ ಇದ್ದ ಕಡೆ ಹೊರತುಪಡಿಸಿ ಬೇರೆಡೆಗೆ ಅನುದಾನ ಖರ್ಚು ಮಾಡುತ್ತಿದ್ದೇವೆ. ಉದಾಹರಣೆಗೆ ಜಿಲ್ಲಾ ಪಂಚಾಯತ್ ವಾರ್ಷಿಕ ಸಭೆಯಲ್ಲಿ ಕಲಬುರಗಿ-ಬೀದರ್ ಭಾಗದಲ್ಲಿ ಒಳನಾಡು ಮೀನುಗಾರಿಕೆಗೆ ಅನುದಾನ ಮೀಸಲಿಡಲಾಗುತ್ತಿದ್ದು, ಇದು ಅನಗತ್ಯವಾಗಿದೆ. ಇದರ ಬದಲಾಗಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ ನಿವಾರಣೆಗೆ ಅನುದಾನ ವರ್ಗಾಯಿಸುವುದು ಒಳ್ಳೆಯದು. ಇಲ್ಲಿನ ಮಕ್ಕಳಲ್ಲಿ ಇನ್ನು ಅರೋಗ್ಯ ಸುಧಾರಣೆ ಕಂಡಿಲ್ಲ. ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕೊಠಡಿಗಳು ನಿರ್ಮಿಸಿದ್ದೇವೆ, ಮಕ್ಕಳಿಲ್ಲದೆ ಅವು ಖಾಲಿ ಉಳಿದಿವೆ. ಈ ಬಗ್ಗೆ ಯೋಚಿಸಿ ಕಾರ್ಯಕ್ರಮ ರೂಪಿಸಬೇಕು. ನೀತಿ, ಕಾರ್ಯಕ್ರಮಗಳು ಹಾಗೂ ಅನುಷ್ಠಾನ ಒಂದಕ್ಕೊಂದು ಸಮನ್ವಯತೆ ಇಲ್ಲದಕ್ಕಾಗಿ ಅನೇಕ ಯೋಜನೆಗಳು ಅಪೂರ್ಣವಾಗುತ್ತಿವೆ. ಅಧಿಕಾರಿಗಳು ಇದನ್ನು ತಪ್ಪಿಸಬೇಕು ಮತ್ತು ಸುಸ್ಥಿರ ಅಭಿವೃದ್ಧಿಗೆ ಯೋಜನೆ ರೂಪಿಸಿ ಅದನ್ನು ಕಾರ್ಯಾನುಷ್ಠಾನಕ್ಕೆ ತರಬೇಕು ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಕೆಕೆಆರ್‌ಡಿಬಿ ಮಂಡಳಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮೂಲಸೌಕರ್ಯ ಬಲವರ್ಧನೆ ಬಂಡವಾಳ ಹಾಕಲಾಗುತ್ತಿದೆ. ಆದರೆ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಸಂಬಳ, ನಿರ್ವಹಣೆ ವ್ಯವಸ್ಥೆ ಮಂಡಳಿಯಿಂದ ಮಾಡುವುದು ಕಷ್ಟ ಸಾಧ್ಯ. ಶಾಲೆಗಳಿಗೆ ವಿದ್ಯುತ್, ಶೌಚಾಲಯ, ಸ್ವಚ್ಚತೆಗೆ ವಾರ್ಷಿಕ 5-10 ಸಾವಿರ ರೂ. ನಿರ್ವಹಣೆಗೆ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆ ಶಾಲೆಗಳ ನಿರ್ವಹಣೆಗೆ ಅನುದಾನ ನೀಡಬೇಕು ಎಂದು ಕೆ.ಕೆ.ಆರ್.ಡಿ.ಬಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓಗಳಾದ ಭಂವರ್ ಸಿಂಗ್ ಮೀನಾ, ಡಾ.ಗಿರೀಶ್ ಡಿ.ಬದೋಲೆ, ಲವೀಶ್ ಒರಡಿಯಾ, ವರ್ನಿತ್ ನೇಗಿ, ಎಂ.ಡಿ.ಹ್ಯಾರಿಸ್ ಸುಮೈರ್ ಸೇರಿದಂತೆ ಏಳು ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಪಿಓ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿಯುಡಿಸಿ ಯೋಜನಾ ನಿರ್ದೇಶಕರು ಭಾಗವಹಿಸಿದ್ದರು.