×
Ad

ʼಆಳಂದ ಮತಗಳ್ಳತನʼದ ಬಗ್ಗೆ ಸಾಬೀತು ಪಡಿಸುತ್ತೇನೆ : ಬಿ.ಆರ್.ಪಾಟೀಲ್ ಸವಾಲು

ʼಮತಗಳ್ಳತನʼ ಕುರಿತು ರಾಹುಲ್ ಗಾಂಧಿಗೆ ಪತ್ರ ಬರೆದ 272 ಬುದ್ಧಿಜೀವಿಗಳ ನಡೆಗೆ ಆಕ್ಷೇಪ

Update: 2025-12-01 13:43 IST

ಕಲಬುರಗಿ: 'ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ರಾಹುಲ್ ಗಾಂಧಿಗೆ ಪತ್ರ ಬರೆದಿರುವ ನ್ಯಾ. ಎಸ್.ಎನ್.ಧಿಂಗ್ರಾ, ನಿರ್ಮಲ್ ಕೌರ್ ಸೇರಿದಂತೆ 272 ಬುದ್ಧಿಜೀವಿಗಳು ಆಳಂದಕ್ಕೆ ಭೇಟಿ ನೀಡಿ, ಪರಿಶೀಲಿಸಲಿ' ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಗಳ್ಳತನ ಆರೋಪದ ಬಗ್ಗೆ ಪತ್ರ ಬರೆದಿರುವ ಬುದ್ಧಿಜೀವಿಗಳು, ನಿವೃತ್ತ ನ್ಯಾಯಾಧೀಶರು ನಮ್ಮ ತಾಲ್ಲೂಕಿನ ಸ್ಥಳಗಳಿಗೆ ಭೇಟಿ ನೀಡಲಿ, ಹೇಗೆ ಮತಗಳ್ಳತನ ಆಗಿದೆ, ಮತಗಳ್ಳತನಕ್ಕೆ ಮಾಡಿರುವ ತಂತ್ರಗಳೆಲ್ಲವೂ ಖುದ್ದಾಗಿ ತಿಳಿದುಕೊಳ್ಳಲಿ, ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ಭರಿಸಲು ನಾನು ಸಿದ್ಧನಿದ್ದೇನೆ ಎಂದರು.

ತನಿಖೆಯ ಹಂತದಲ್ಲಿ ಬುದ್ಧಿಜೀವಿಗಳು ಪತ್ರ ಬರೆದು ಹೇಳಿಕೆ ನೀಡುವುದು ಸರಿಯಲ್ಲ, ಒಂದು ವೇಳೆ ಹಾಗೆ ಹೇಳುವುದಾದರೆ ತನಿಖೆ ಸಂಪೂರ್ಣ ಮುಗಿದ ಬಳಿಕ ಹೇಳಿಕೆ ಕೊಡಲಿ ಎಂದ ಅವರು, ನಾನೀಗ ಬಹಿರಂಗ ಪತ್ರ ಬರೆದಿದ್ದೇನೆ, ಇಲ್ಲಿಗೆ ಬಂದು ನೋಡಲಿ, ಮತಗಳ್ಳತನ ಆಗಿರುವ ಬಗ್ಗೆ ಸಂಪೂರ್ಣವಾಗಿ ಸಾಬೀತು ಪಡಿಸುತ್ತೇನೆ ಎಂದು ಸವಾಲು ಹಾಕಿದರು.

ಆಳಂದದಲ್ಲಿ ಮತಗಳ್ಳತನ ಆಗಿದೆ ಎಂದು ನಾನಷ್ಟೇ ದೂರು ಕೊಟ್ಟಿಲ್ಲ, ಈ ಬಗ್ಗೆ ಸ್ವತಃ ಚುನಾವಣಾ ಅಧಿಕಾರಿಯೇ ದೂರು ನೀಡಿದ್ದಾರೆ. ಇದು ನಿಜ ಎಂದು ಗೊತ್ತಾದ ಬಳಿಕವೇ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ತನಿಖೆಗೆ ಒತ್ತಾಯಿಸಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News