×
Ad

ಕಲಬುರಗಿ ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ : ಕ್ವಾರ್ಟರ್‌ ಫೈನಲ್‌ಗೆ ವೈಷ್ಣವಿ ಅಡ್ಕರ್‌, ಅಂಕಿತಾ ರೈನಾ

ಸೋಹಾ ಸಾದಿಕ್, ಆಕಾಂಕ್ಷಾ ದಿಲೀಪ್ ನಿಟ್ಟುರೆ ಜೋಡಿಗೆ ಜಯ; ಸ್ನಿಗ್ಧ ಕಾಂತಾ, ಹರ್ಷಿಣಿ ನಾಗರಾಜ್‌ ಜೋಡಿಗೆ ನಿರಾಶೆ

Update: 2026-03-05 20:21 IST

ಕಲಬುರಗಿ: ಇಲ್ಲಿನ ಚಂದ್ರಶೇಖರ್‌ ಪಾಟೀಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಟಿಎಫ್‌ ಮಹಿಳಾ ಸಿಂಗಲ್ಸ್‌ ನಲ್ಲಿ ಭಾರತದ ಆಟಗಾರ್ತಿಯರಾದ ವೈಷ್ಣವಿ ಅಡ್ಕರ್‌ ಮತ್ತು ಅಂಕಿತಾ ರೈನಾ ಅದ್ಭುತ ಪ್ರದರ್ಶನ ನೀಡಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸಿಂಗಲ್ಸ್ ಸೆಕೆಂಡ್ ರೌಂಡ್ಸ್ :

ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಮೂರನೇ ಶ್ರೇಯಾಂಕಿತ ವೈಷ್ಣವಿ ಅಡ್ಕರ್‌ 6-2, 6-0 ಸೆಟ್‌ಗಳಿಂದ ಅನ್ನಾ ಸೀದಿಶೇವಾ ಅವರನ್ನು ಮಣಿಸಿದರು. ಆರನೇ ಗೇಮ್‌ನಲ್ಲಿ ಅಡ್ಕರ್‌ ಮೂರು ಬ್ರೇಕ್‌ ಪಾಯಿಂಟ್‌ಗಳನ್ನು ಸೃಷ್ಟಿಸಲು ತೀಕ್ಷ್ಣ ರಿಟರ್ನ್‌ಗಳೊಂದಿಗೆ ಒತ್ತಡ ಹೇರಿ ಎದುರಾಳಿಗೆ ಪರಾಭವಗೊಳಿಸಿದರು.

ಎಂಟನೇ ಶ್ರೇಯಾಂಕಿತ ಅಂಕಿತಾ ರೈನಾ 6-2, 6-1 ಸೆಟ್‌ಗಳಿಂದ ಮಿಲಾನಾ ಮಸ್ಲೆಂಕೋವಾ ಅವರ ವಿರುದ್ಧ ನೇರ ಸೆಟ್ ಗಳಿಂದ ಗೆದ್ದು ಬೀಗಿದರು.

ಇನ್ನೊಂದೆಡೆ, ಎಲಿನಾ ನೆಪ್ಲಿ ಅವರು ಐದನೇ ಶ್ರೇಯಾಂಕದ ಝೀಲ್‌ ದೇಸಾಯಿ ಅವರನ್ನು 7-6 (3), 6-3 ಸೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅಗ್ರ ಶ್ರೇಯಾಂಕಿತ ಆಟಗಾರ್ತಿ ಜಾಸ್ಮಿನ್‌ ಗಿಂಬ್ರೆರೆ 7-5, 7-5 ಸೆಟ್‌ ಗಳಿಂದ ಇವಾ ಮೇರಿ ಡೆಸ್ವಿಗ್ನೆಸ್‌ ಅವರನ್ನು ಸೋಲಿಸಿದರು, ಎರಡನೇ ಶ್ರೇಯಾಂಕದ ಅಂಚಿಸಾ ಚಾಂಟಾ ಅವರು 6-3, 6-3 ಸೆಟ್‌ಗಳಿಂದ ಪೊಲಿನಾ ಕುಹರೆಂಕೊ ವಿರುದ್ಧ ಜಯ ಸಾಧಿಸಿದರು.

ಆರನೇ ಶ್ರೇಯಾಂಕದ ಥಾಸಪೋರ್ನ್‌ ನಕ್ಲೊ 6-3, 6-0 ಸೆಟ್‌ಗಳಿಂದ ಸೋಫಿಯಾ ಮಾರ್ಟಿಯಾನೊವಾ ಅವರನ್ನು ಪರಾಭವಗೊಳಿಸಿದರೆ, ಮಾಯಾನ್‌ ಲಾರೋನ್‌ 6-3, 6-1 ಸೆಟ್‌ಗಳಿಂದ ಏಳನೇ ಶ್ರೇಯಾಂಕಿತ ಮಿಚಿಕಾ ಒಜೆಕಿ ಅವರನ್ನು ಸೋಲಿಸಿದರು. ಇದೇ ವೇಳೆ ಎವ್ಗೆನಿಯಾ ಬುರ್ಡಿನಾ 7-6 (1), 6-2 ಸೆಟ್‌ಗಳಿಂದ ಸೋಫಿಯಾ ಸುಸ್ಲೋವಾ ಅವರನ್ನು ಪರಾಭವಗೊಳಿಸಿದರು.

ಡಬಲ್ಸ್ ಕ್ವಾರ್ಟರ್‌ ಫೈನಲ್‌ ಫಲಿತಾಂಶ :

ಮಹಿಳೆಯರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಸೋನಾಲ್‌ ಪಾಟೀಲ್‌ ಮತ್ತು ಬೇಲಾ ತಮ್ಹಾಂಕರ್‌ ಜೋಡಿ 7-5, 6-2 ಸೆಟ್‌ಗಳಿಂದ ಕರ್ನಾಟಕದ ಸ್ನಿಗ್ಧ ಕಾಂತಾ ಮತ್ತು ಹರ್ಷಿಣಿ ಎನ್‌.ನಾಗರಾಜ್‌ ಅವರನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು.

ದ್ವಿತೀಯ ಶ್ರೇಯಾಂಕದ ವೈಷ್ಣವಿ ಅಡ್ಕರ್‌ ಮತ್ತು ಅಂಕಿತಾ ರೈನಾ 6-2, 6-2 ಸೆಟ್‌ಗಳಿಂದ ಎವ್ಗೆನಿಯಾ ಬುರ್ಡಿನಾ ಮತ್ತು ಸೋಫಿಯಾ ಮಾರ್ಟಿಯಾನೊವಾ ಅವರನ್ನು ಮಣಿಸಿದರು.

ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶ್ರವ್ಯಾ ಶಿವಾನಿ ಚಿಲಕಲಪುಡಿ ಮತ್ತು ಮಿಚಿಕಾ ಒಜೆಕಿ ಜೋಡಿ 7-5, 2-6, 10-6 ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ಜೀಲ್‌ ದೇಸಾಯಿ ಮತ್ತು ಎಲಿನಾ ನೆಪ್ಲಿ ಜೋಡಿಯನ್ನು ಸೋಲಿಸಿದರು.

ಕರ್ನಾಟಕದ ಸೋಹಾ ಸಾದಿಕ್, ಆಕಾಂಕ್ಷಾ ದಿಲೀಪ್ ನಿಟ್ಟುರೆ ಜೊತೆಗೂಡಿ ಮೊದಲ ಶ್ರೇಯಾಂಕದ ಶ್ರೀವಲ್ಲಿ ಭಮಿದ್ಪತಿ ಮತ್ತು ಜಾಸ್ಮಿಜನ್ ಗಿಂಬ್ರೆರೆ ವಿರುದ್ಧ 2-6, 7-5 [12-10] ಅಂತರದಲ್ಲಿ ಜಯಗಳಿಸಿ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News