×
Ad

ಕಲಬುರಗಿ | 24.96 ಲಕ್ಷ ರೂ. ಮೌಲ್ಯದ ಸ್ವತ್ತು ವಶ; 7 ಆರೋಪಿಗಳ ಬಂಧನ: ಡಾ.ಶರಣಪ್ಪ ಎಸ್.ಡಿ.

Update: 2026-03-05 20:10 IST

ಕಲಬುರಗಿ : ನಗರದ ನಾಲ್ಕು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ, ಬೈಕ್ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿ 24.96 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ನಿವಾಸಿ ಸುರೇಶ್ ಅಲಿಯಾಸ್ ಗಂಗಾರಾಮ ಡೌಲತ್ ಚವ್ಹಾಣನನ್ನು ಬಂಧಿಸಿ 6.75 ಲಕ್ಷ ರೂ. ಮೌಲ್ಯದ 45 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಕಳ್ಳತನವಾಗಿದ್ದ ಬೈಕ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಅಪರಾಧಿಯಾಗಿದ್ದ ಶೇಖ್ ನಿಸಾರ್ ಅಹಮದ್‌ನನ್ನು ಬಂಧಿಸಿ ₹3.90 ಲಕ್ಷ ಮೌಲ್ಯದ 8 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ಅದೇ ರೀತಿ ಸ್ಟೇಷನ್ ಬಝಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8.20 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಕಾಳಗಿ ತಾಲೂಕಿನ ಕೋರವಾರ ನಿವಾಸಿ ರಾಮಚಂದ್ರ ಹೊಸಮನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನೂ ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 5 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಕುಖ್ಯಾತ ದರೋಡೆಕೋರರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 6.11 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್‌ಗಳು, ಬಂಗಾರದ ಆಭರಣಗಳು, ಬೈಕ್, ವ್ಯಾನಿಟಿ ಬ್ಯಾಗ್ ಸೇರಿದಂತೆ ಇತರೆ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಜಾದಪುರದ ಅಬ್ಬು ಶೇಖ್, ಬಿಲಾಲಬಾದ ಕಾಲೋನಿಯ ಮಾಜಿದ್ ಅಲಿಯಾಸ್ ಮಟಕಾ ಮಾಜೀದ್, ಸೋನಿಯಾ ಗಾಂಧಿ ಕಾಲೋನಿಯ ಶೇಖ್ ಹುಸೇನ್ ಹಾಗೂ ಮಿಲ್ಲತ್ ನಗರದ ಮಹಮದ್ ಆರೀಫ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ್ ನಾಯಕ, ಎಸಿಪಿಗಳಾದ ಶಿವನಗೌಡ ಪಾಟೀಲ್, ಶರಣಬಸಪ್ಪ ಸುಬೇದಾರ್, ವಾಜೀದ್ ಪಟೇಲ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News