×
Ad

ಕಲಬುರಗಿ | ʼಆನ್‌ಲೈನ್‌ ಎಂಪಿʼ ಎಂದು ರಾಧಾಕೃಷ್ಣ ದೊಡ್ಡಮನಿಗೆ ಉಮೇಶ್ ಜಾಧವ್ ಟೀಕೆ

Update: 2026-03-05 20:04 IST

ಕಲಬುರಗಿ : ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಕಳೆದ ಎರಡುವರೆ ವರ್ಷಗಳಲ್ಲಿ ಒಂದೇ ಒಂದು ಸಭೆ ನಡೆಸದೆ, ಇತ್ತೀಚೆಗೆ ದಿಶಾ ಸಭೆಯನ್ನು ಆನ್‌ಲೈನ್ ಮೂಲಕ ನಡೆಸಿ “ಕಲಬುರಗಿಯ ಆನ್‌ಲೈನ್ ಎಂಪಿ” ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಲೇವಡಿ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಗಾಗಿ ಫೆಬ್ರವರಿ 28ರಂದು ತರಾತುರಿಯಲ್ಲಿ ದಿಶಾ ಸಭೆ ಕರೆಯಲಾಗಿದ್ದು, ಸ್ವತಃ ಲೋಕಸಭಾ ಸದಸ್ಯರು ಗೈರು ಹಾಜರಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದರು. ದಿಶಾ ಸಭೆಯನ್ನು ಆನ್‌ಲೈನ್ ಮೂಲಕ ನಡೆಸಿರುವುದು ಭಾರತದ ಇತಿಹಾಸದಲ್ಲೇ ಪ್ರಥಮ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕಾದ ಎಂಪಿ ಮತದಾರರಿಗೆ ಲಭ್ಯವಾಗದ ಪರಿಸ್ಥಿತಿ ಉಂಟಾಗಿದೆ. ತಾನು ಎಂಪಿ ಆಗಿದ್ದಾಗ ಸುಳ್ಳು ಹೇಳಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿ, ಈಗ ಅವರ ಸ್ಥಿತಿ ಹುಡುಕಬೇಕಾಗಿದೆ ಎಂದರು.

ಎಂಪಿ, ಎಂಎಲ್‌ಎ ಹಾಗೂ ಸಚಿವ ಸ್ಥಾನಗಳು ಖರ್ಗೆ ಮನೆತನದಲ್ಲೇ ಇರಬೇಕು ಎಂಬ ಸ್ವಾರ್ಥ ರಾಜಕಾರಣದಿಂದ ಕಲಬುರಗಿಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಕಟುವಾಗಿ ಆರೋಪಿಸಿದರು.

ಕಲಬುರಗಿ ವಿಮಾನ ನಿಲ್ದಾಣ ಬಂದ್ ಆದರೂ ಲೋಕಸಭಾ ಸದಸ್ಯರು ಕೇಂದ್ರಕ್ಕೆ ಕೇವಲ ಒಂದು ಪತ್ರ ಬರೆದು ಮೌನವಾಗಿರುವುದು ವಿಷಾದಕರ ಸಂಗತಿ ಎಂದು ಹೇಳಿದರು. ಕೊರೋನಾ ಅವಧಿಯಲ್ಲಿ ವಿಮಾನ ಹಾರಾಟ ನಡೆದಿದ್ದರೂ, ಈಗ ಶ್ರೀಮಂತರ ವಿಮಾನ ಮಾತ್ರ ಇಳಿಯುವ ನಿಲ್ದಾಣವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಬ್ಯಾಂಕರ್ಸ್ ಸಭೆಯನ್ನೂ ನಡೆಸದೆ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಪ್ರಸ್ತುತ ಲೋಕಸಭಾ ಸದಸ್ಯರ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಡಾ. ಉಮೇಶ್ ಜಾಧವ್ ದೂರಿದರು.

ಎಂಎಲ್ಸಿ ಶಶಿಲ್ ಜಿ ನಮೋಶಿ, ಶಾಸಕ ಬಸವರಾಜ ಮತ್ತಿಮಡು , ರಾಜಕುಮಾರ್ ಪಾಟೀಲ್ ತೆಲ್ಕೂರ, ಅಶೋಕ್ ಬಗಲಿ, ಶರಣಪ್ಪ ತಳವಾರ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಹೇಂದ್ರ ಪೂಜಾರಿ ಚಂದ್ರಶೇಖರ ಪರಸರೆಡ್ಡಿ, ನರಸಪ್ಪಗೌಡ, ಬಾಬುರಾವ್ ಹಾಗರಗುಂಡಗಿ, ಸೇರಿದಂತೆ ಹಲವರು ಇದ್ದರು.

ಬಾಕ್ಸ್...

ದಲಿತರ ಹಣ ಗ್ಯಾರಂಟಿ ಯೋಜನೆಗಳ ಪಾಲು: ತೆಲ್ಕೂರ್

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಬಂದಾಗಿನಿಂದಲೂ ದಲಿತರ ಹಣವನ್ನು ಲೂಟಿಯಾಡುತ್ತಿದೆ. ಎರಡೂವರೆ ವರ್ಷದಲ್ಲಿ 38,859 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಇದರಿಂದ ಅಂಬೇಡ್ಕರ್, ಅಡಿಜಾಂಬವ, ವಾಲ್ಮೀಕಿ, ತಾಂಡಾ, ಲಿಡ್ಕರ್ ಅಭಿವೃದ್ಧಿ ನಿಗಮಗಳು ಹಣವಿಲ್ಲದೆ ಸೊರಗಿವೆ. ಇತ್ತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕೂಡ ಕೊಡುತ್ತಿಲ್ಲ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News