×
Ad

ಕಲಬುರಗಿ ಜಿಲ್ಲೆಯಲ್ಲಿ ಇಂಗಾಲ ಕ್ರೆಡಿಟ್ ಉತ್ಪಾದನೆ : ಸಚಿವ ಪ್ರಿಯಾಂಕ್ ಖರ್ಗೆ

Update: 2025-05-04 22:39 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ಭೂಮಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕ್ಷೀಣಿಸಿರುವ ಅರಣ್ಯೀಕರಣಕ್ಕೆ ಚಾಲನೆ ನೀಡಲು ಹಾಗೂ ಇಂಗಾಲದ ಡೈಆಕ್ಸೈಡ್ ಅನ್ನು ಸೆರೆಹಿಡಿಯಲು ಮತ್ತು ವ್ಯಾಪಾರ ಮಾಡಬಹುದಾದ ಇಂಗಾಲದ ಕ್ರೆಡಿಟ್‍ಗಳನ್ನು ಸೃಷ್ಟಿಸಲು ನಾವು ನರೇಗಾ ಯೋಜನೆಯನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಅರಣ್ಯೀಕರಣ ಮತ್ತು ಜೈವಿಕ ಇಂಧನ ಯೋಜನೆಗಳನ್ನು ಒಟ್ಟುಗೂಡಿಸಿ ಇಂಗಾಲ ಕ್ರೆಡಿಟ್‍ಗಳನ್ನು ಉತ್ಪಾದಿಸುವ ಪ್ರಾಯೋಗಿಕ ಯೋಜನೆಯನ್ನು ವಿನ್ಯಾಸಗೊಳಿಸುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಜೈವಿಕ ಇಂಧನ ಮಂಡಳಿಯ ಅಧಿಕಾರಿಗಳು ಹಾಗೂ ಸಲಹೆಗಾರರೊಂದಿಗೆ ಶನಿವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಚರ್ಚೆ ನಡೆಸಿದರು.

ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಮತ್ತು ಇಂಗಾಲ ಕ್ರೆಡಿಟ್‍ಗಳ ಉತ್ಪಾದನೆಗೆ ಅರ್ಹತೆ ಪಡೆಯುವ ಬಯೋಚಾರ್ ಹಾಗೂ ಜೈವಿಕ ಅನಿಲ ಉತ್ಪಾದನೆಯ ಮೂಲಕ ಜೈವಿಕ ಇಂಧನ ಮಂಡಳಿಯು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಸಹ ನಾವು ಅನ್ವೇಷಿಸಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮುಂಬರುವ ತಿಂಗಳುಗಳಲ್ಲಿ, ಇಂಗಾಲದ ಆರ್ಥಿಕತೆಯಿಂದ ಮೌಲ್ಯವನ್ನು ದುಪ್ಪಟ್ಟುಗೊಳಿಸಲು ಮತ್ತು ಅದನ್ನು ಗ್ರಾಮೀಣ ಸಮುದಾಯಗಳಿಗೆ ಮರಳಿ ಒದಗಿಸಲು ನಮ್ಮ ಅರಣ್ಯೀಕರಣ ಮತ್ತು ಶುದ್ಧ ಇಂಧನ ಪ್ರಯತ್ನಗಳನ್ನು ಜೋಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಸುಸ್ಥಿರತೆ ಮತ್ತು ಗ್ರಾಮೀಣ ಅಭಿವೃದ್ಧಿ ಹೇಗೆ ಪರಸ್ಪರ ಜತೆಯಾಗಿ ಸಾಗಬಹುದು ಎಂಬುದಕ್ಕೆ ಮಾದರಿಯಾಗುವ ಸಾಮಥ್ರ್ಯ ಈ ಪ್ರಾಯೋಗಿಕ ಯೋಜನೆಗೆ ಇದೆ ಎಂದು ಅವರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News