Chincholi | ಸಿದ್ದಸಿರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ
ಚಿಂಚೋಳಿ: ತಾಲೂಕಿನ ಸಿದ್ದಸಿರಿ ಸಕ್ಕರೆ ಮತ್ತು ಇಥೇನಾಲ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವುದನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಕಾರ್ಖಾನೆಯನ್ನು ತಕ್ಷಣ ಪುನರಾರಂಭಿಸುವಂತೆ ಆಗ್ರಹಿಸಿ ಮೂಲನಿವಾಸಿ ಕಬ್ಬು ಬೆಳೆಗಾರರ ಸಂಘಟನೆಯ ವತಿಯಿಂದ ಕಾರ್ಖಾನೆಯ ಮುಖ್ಯ ದ್ವಾರದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ಮುಖಂಡ ಮಾರುತಿ ಗಂಜಗಿರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು. ಈ ವೇಳೆ ರಾಷ್ಟ್ರಪತಿಗಳಿಗೆ ತಹಶೀಲ್ದಾರ್ ಮೂಲಕ ತಮ್ಮ ಹಕ್ಕೋತ್ತಾಯಗಳ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಕೇಂದ್ರ ಸರ್ಕಾರದ ಏಕಾಏಕಿ ನಿರ್ಧಾರದಿಂದ ಚಿಂಚೋಳಿ ಹಾಗೂ ಸುತ್ತಮುತ್ತಲಿನ ಭಾಗದ ಸಾವಿರಾರು ರೈತರು ತೀವ್ರ ಆತಂಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಬರಗಾಲ ಹಾಗೂ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ರೈತರು, ಕಳೆದ ವರ್ಷ ಸಿದ್ದಸಿರಿ ಸಂಸ್ಥೆಯು ಸರಿಯಾದ ಸಮಯಕ್ಕೆ ಕಬ್ಬು ಖರೀದಿಸಿ ಹಣ ಪಾವತಿಸಿದ್ದರಿಂದ ಈ ಬಾರಿಯೂ ನಂಬಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದಾರೆ. ಇದೀಗ ಕಟಾವಿನ ಸಮಯದಲ್ಲಿ ಕಾರ್ಖಾನೆ ಬಂದ್ ಆದರೆ ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಿಸಬೇಕಾಗುತ್ತದೆ. ಇದರಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗುವುದಲ್ಲದೆ, ಇಳುವರಿಯಲ್ಲಿಯೂ ನಷ್ಟ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿದ್ದಸಿರಿ ಸಕ್ಕರೆ ಮತ್ತು ಇಥೇನಾಲ್ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಅಗತ್ಯ ಅನುಮತಿ ನೀಡಿ ಕೂಡಲೇ ಪುನರಾರಂಭಿಸಬೇಕು. ಚಿಂಚೋಳಿ ತಾಲೂಕಿನ ರೈತರು ಬೆಳೆದ ಕಬ್ಬಿಗೆ ಮೊದಲ ಆದ್ಯತೆ ನೀಡಿ ಖರೀದಿಸಬೇಕು. ರೈತರು ಬೆಳೆದ ಕಬ್ಬಿಗೆ ಪ್ರತಿ ಟನ್ಗೆ 6,500 ರೂ. ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕಟಾವಿಗೆ ಬಂದಿರುವ ಯಾವುದೇ ರೈತರ ಕಬ್ಬು ಮಾರಾಟವಾಗದೆ ಉಳಿಯದಂತೆ ಜಿಲ್ಲಾಡಳಿತವು ವಿಶೇಷ ಕ್ರಮ ಕೈಗೊಂಡು ಪರ್ಯಾಯ ಖರೀದಿ ವ್ಯವಸ್ಥೆ ಕಲ್ಪಿಸಬೇಕು. ಕಬ್ಬು ಖರೀದಿಸಿದ ಬಳಿಕ ರೈತರಿಗೆ ಪಾವತಿಸಬೇಕಾದ ಹಣವನ್ನು ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಪಾವತಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಸುಧಾಕರೆಡ್ಡಿ ಪಾಟೀಲ್, ಲಾಲಪ್ಪ ಜ್ಯೋತಿ, ಸಂತೋಷ ಪವಾರ, ಅನೀಲರೆಡ್ಡಿ ಮಿರಿಯಾಣ, ರವಿಕುಮಾರ್ ರುಸ್ತಂಪೂರ, ಮೋಹನ ಐನಾಪೂರ, ಮಹೇಶ್ ಕುಸರಂಪಳ್ಳಿ, ರಂಗಣ್ಣಾ ಪೂಜಾರಿ, ಮಲ್ಲಿಕಾರ್ಜುನ ಬೂಶೆಟ್ಟಿ, ಲಿಂಗರಡ್ಡಿ ಹೋಡೆಬೀರನಳ್ಳಿ, ಶರಣಬಸ್ಸಪ್ಪ ಸೊಂತ, ಮಲ್ಲಿಕಾರ್ಜುನ ದೇಸಾಯಿ, ವೀರೇಶ್ ದೇಸಾಯಿ, ಸುನೀಲ್ ಕಪೂರ, ಹಣಮಂತ ಸುಂಕಿನ್, ಶರತ್ ಬೀರಾದರ್, ನಾರಾಯಣರೆಡ್ಡಿ, ಕಾಶೀರಾಂ ದೇಗಲ್ಮಡಿ, ರಾಜು ಹೊಸಳ್ಳಿ, ಹರ್ಷ ಸುಂಠಾಣ, ಪ್ರದೀಪ್ ಕೊಳ್ಳೂರ್, ಅಪ್ಪಣ್ಣಾ ತಳವಾರ, ಮೌನೇಶ್ ಗಾರಂಪಳ್ಳಿ, ಮಹೇಶ್ ಭೂತಾಯಿ, ಪ್ರಕಾಶ್ ಭಕ್ತಂಪಳ್ಳಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.