ಚಿತ್ತಾಪುರ | ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧದ ಲಂಚದ ಆರೋಪ ಸತ್ಯಕ್ಕೆ ದೂರ : ಮಾರುತಿ ಹುಳಗೋಳಕರ್
ಚಿತ್ತಾಪುರ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ವಿರುದ್ಧದ ಲಂಚದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಾರುತಿ ಹುಳಗೋಳಕರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಚಿವ ತಿಮ್ಮಾಪುರ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಬಿಜೆಪಿಯಿಂದ ನಡೆಯುತ್ತಿರುವ ಹುನ್ನಾರವಾಗಿದೆ, ಸಚಿವರ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಚಿವರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರ ವಿರುದ್ಧದ ಆರೋಪಗಳು ಆಧಾರರಹಿತ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನಿವಾಸಿ ಲಕ್ಷ್ಮೀನಾರಾಯಣ ಎಂಬುವವರು ಮೈಕ್ರೋ ಬ್ರೂವರಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಆರಂಭಿಸಲು ಪರವಾನಗಿ ಪಡೆಯುವ ಸಲುವಾಗಿ ಅಬಕಾರಿ ಇಲಾಖೆ ಅಧಿಕಾರಿಗಳಾದ ಡಿ.ಸಿ. ಜಗದೀಶ್ ನಾಯ್ಕ ಹಾಗೂ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ ವೇಳೆ, ಪರವಾನಗಿಗೆ ಸುಮಾರು 1.50 ಕೋಟಿ ರೂ. ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ. ನಂತರ ಯಾರಿಗೆ ಎಷ್ಟು ಪಾಲು ಎಂಬ ಕುರಿತು ಚರ್ಚೆ ನಡೆದಾಗ, ಲಂಚ ಪಡೆಯುವ ದುರುದ್ದೇಶದಿಂದ ತಪ್ಪಾಗಿ ಸಚಿವರು ಹಾಗೂ ಅವರ ಪುತ್ರನ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ದುರುದ್ದೇಶಪೂರಿತ ಆರೋಪಗಳನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಮಾರುತಿ ಹುಳಗೋಳಕರ್ ತಿಳಿಸಿದ್ದಾರೆ.