ಕಲಬುರಗಿ | ತೊಗರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಧರಣಿ ತಾತ್ಕಾಲಿಕ ಹಿಂದಕ್ಕೆ
ಕಲಬುರಗಿ, ಜ.23: ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಎರಡನೇ ದಿನಕ್ಕೆ(ಶುಕ್ರವಾರ) ತಾತ್ಕಾಲಿಕವಾಗಿ ಮೊಟಕುಗೊಂಡಿದೆ.
ಗುರುವಾರ ಬೆಳಗ್ಗೆಯಿಂದ ಪ್ರಾರಂಭವಾದ ರೈತರ ಧರಣಿಯು ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಮಧ್ಯಾಹ್ನದ ವೇಳೆಯಲ್ಲಿ ರೈತ ಮುಖಂಡರು ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿಲ್ಲಿಸುವ ಮೂಲಕ ರಸ್ತಾ ರೋಕೋ ಚಳುವಳಿ ನಡೆಸಿದರು.
ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆ ಆಲಿಸಿದರು. ಇದೇ ಸಮಯದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟರು. ಈ ಮೇರೆಗೆ ರೈತರು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾ ಘೋಷಿಸಿದರು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡಬೇಕು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿದರು.
ತೊಗರಿ ಈ ಭಾಗದ ವಾಣಿಜ್ಯ ಬೆಳೆ ಆಗಿದ್ದಲ್ಲದೆ ಆರ್ಥಿಕತೆ ನಿರ್ಧರಿಸುವ ಬೆಳೆಯಾಗಿದೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ವೀರಣ್ಣ ಗಂಗಾಣಿ, ಸಿದ್ದಪ್ಪ ಕಲಶೆಟ್ಟಿ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ :
ತೊಗರಿಗೆ ಬೆಂಬಲ ಬೆಲೆ ಘೋಷಣೆ ಆಗಬೇಕು. ಬೆಳೆ ವಿಮೆ ಕೂಡಲೇ ಬಿಡುಗಡೆಗೊಳಿಸಬೇಕು. ಒಂದು ವೇಳೆ ಜನವರಿ 26ರೊಳಗೆ ಈಡೇರಿಸದೇ ಇದ್ದರೆ ಮತ್ತೆ ಹೋರಾಟ ಕೈಗೊಳ್ಳಲಾಗುವುದು. 26 ರ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅದರಂತೆಯೇ ರಿಂಗ್ ರಸ್ತೆಗಳಲ್ಲಿ ರಸ್ತಾ ರೋಕೋ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಕರೆಪ್ಪ ಕರಗೊಂಡ, ಭೀಮಾಶಂಕರ ಮಾಡ್ಯಾಳ ಮತ್ತಿತರರು ತಿಳಿಸಿದ್ದಾರೆ.