ಕಲಬುರಗಿ | 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ ಅಧಿಕಾರಿ
ಸತೀಶ ರಾಠೋಡ
ಕಲಬುರಗಿ: ಹೊಲದ ಪಹಣಿಯಲ್ಲಿ ತಪ್ಪಾಗಿ ದಾಖಲಾಗಿದ್ದ ಹೆಸರನ್ನು ಸರಿಪಡಿಸಿಕೊಡುವುದಾಗಿ ಹೇಳಿ 10,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಜೇವರ್ಗಿ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಫ್‌ಡಿಎ ಸತೀಶ್ ರಾಠೋಡ ಬಂಧಿತ ಆರೋಪಿಯಾಗಿದ್ದಾರೆ.
ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಶಿವಕುಮಾರ ಬಸಪ್ಪ ಹೆಗಡೆ ಅವರ ಮಾವ ಪಾಂಡುರಂಗ ಅವರ ಹೆಸರಿನಲ್ಲಿರುವ ಹಂಚಿನಾಳ ಗ್ರಾಮದ ಕೃಷಿ ಭೂಮಿಯ ಪಹಣಿಯಲ್ಲಿ ತಪ್ಪಾಗಿ ದಾಖಲಾಗಿದ್ದ ಹೆಸರನ್ನು ತಿದ್ದುಪಡಿ ಮಾಡಿ, ತಹಶೀಲ್ದಾರ್ ಸಹಿ ಪಡೆದು ಸಹಾಯಕ ಆಯುಕ್ತರಿಗೆ ಫೈಲ್ ಕಳುಹಿಸುವುದಾಗಿ ಹೇಳಿ ಆರೋಪಿಯು 10 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಮೇರೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ಅವರ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪೂರ್ಣಗೊಂಡ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಯುಕ್ತ ಮೂಲಗಳು ತಿಳಿಸಿವೆ.