×
Ad

ಕಲಬುರಗಿ | ಅಂತರ್ ರಾಜ್ಯ ಕಳ್ಳನ ಬಂಧನ ; 7.35 ಲಕ್ಷ ಮೌಲ್ಯದ 18 ಬೈಕ್ ವಶ: ಎಸ್ಪಿ ಅಡ್ಡೂರು ಶ್ರೀನಿವಾಸಲು

Update: 2026-01-23 22:57 IST

ಕಲಬುರಗಿ, ಜ.23: ಮಹಾರಾಷ್ಟ್ರ ಗಡಿಭಾಗದ ಅಫಜಲಪುರ, ಆಳಂದ ಸೇರಿದಂತೆ ವಿಜಯಪುರ ಜಿಲ್ಲೆಯ ಪ್ರದೇಶಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನ ಬಳಿಯಿಂದ 7.35 ಲಕ್ಷ ಮೌಲ್ಯದ 18 ಬೈಕ್ ಗಳನ್ನು ವಶಕ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ಅಫಜಲಪುರ ತಾಲೂಕಿನ ಬಡದಾಳ ತಾಂಡಾದ ಸಂಜಯ ಖೇಮು ಚವ್ಹಾಣ ಬಂಧಿತ ಆರೋಪಿ.

ಆರೋಪಿಯು ಕದ್ದ ಬೈಕ್‌ಗಳನ್ನು ಅಫಜಲಪುರದ ಮಲ್ಲಾಬಾದ್ ಗ್ರಾಮದ ಪರಶುರಾಮ ಅಲಿಯಾಸ್ ಸುನೀಲ್ ಎಂಬಾತನಿಗೆ ಮಾರಾಟ ಮಾಡಲು ನೀಡಿದ್ದ. ಮಾಹಿತಿ ಆಧಾರದ ಮೇಲೆ ಪರಶುರಾಮನ ಶೆಡ್‌ನಲ್ಲಿ ಇಡಲಾಗಿದ್ದ ಸ್ಥಳಕ್ಕೆ ಹೋಗಿ ಬೈಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪರಶುರಾಮ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಶುಕ್ರವಾರ ಜಿಲ್ಲಾ ಪೊಲೀಸ್ ಭವನದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅತನೂರ ಗ್ರಾಮದ ಭೀಮರಾಯ ಜಮಾದಾರ ಎನ್ನುವರು ತಮ್ಮ ಬೈಕ್ ಕಳ್ಳತನವಾಗಿದೆ ಎಂದು ರೇವೂರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖಾ ತಂಡ ರಚಿಸಲಾಗಿತ್ತು. ಆಳಂದ ಉಪವಿಭಾಗದ ಡಿಎಸ್ಪಿ ತಮ್ಮರಾಯ ಪಾಟೀಲ್, ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ ಹಾಗೂ ರೇವೂರ ಪಿಎಸ್‌ಐ ವಾತ್ಸಲ್ಯ ಅವರ ನೇತೃತ್ವದ ತಂಡವು ಶೋಧ ನಡೆಸಿ, ಆರೋಪಿಯನ್ನು ಬಂಧಿಸಿ, ಎರಡು ರಾಯಲ್ ಎನ್ ಫಿಲ್ಡ್ ಬುಲೆಟ್ ಸೇರಿ 18 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಡ್ಡೂರು ಶ್ರೀನಿವಾಸಲು ತಿಳಿಸಿದರು.

ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಎಂಟು ಪ್ರಕರಣ ದಾಖಲಾಗಿದ್ದು, ಉಳಿದ ವಾಹನಗಳ ವಾರಸುದಾರ ಬಗ್ಗೆ ಪತ್ತೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ವಾತ್ಸಲ್ಯ ಮತ್ತಿತ್ತರ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News