ಚಿತ್ತಾಪುರ | ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನರೇಗಾ ನೌಕರರಿಂದ ಪ್ರತಿಭಟನೆ
ಕಲಬುರಗಿ: ರಾಜ್ಯಾದ್ಯಂತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೊರ ಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 6 ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಹಾಗೂ ಬಿಎಫ್.ಟಿ ಸಿಬ್ಬಂದಿಗಳ ರಿನಿವಲ್ ಪದ್ಧತಿ ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾತ್ಮಾಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಚಿತ್ತಾಪುರ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಾವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ಥಳಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಭಾಗಿಯಾಗಿದ್ದೇವೆ. ಕರ್ನಾಟಕ ರಾಜ್ಯಾದ್ಯಂತ 3,632 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಜಿಲ್ಲಾ ಪಂಚಾಯತ್ ಹಂತದಲ್ಲಿ ಎ.ಡಿ.ಪಿ.ಸಿ. ಡಿ.ಎಂ.ಐ.ಎಸ್., ಡಿ.ಐ.ಇ.ಸಿ. ಜಿಲ್ಲಾ ಅಕೌಂಟ್ ಮ್ಯಾನೇಜರ್, ಅದೇ ರೀತಿ ತಾಲೂಕು ಪಂಚಾಯತ್ ಹಂತದಲ್ಲಿ ತಾಂತ್ರಿಕ ಸಂಯೋಜಕರು, ಎಂ.ಐ.ಎಸ್. ಸಂಯೋಜಕರು, ಐ.ಇ. ಸಿ. ಸಂಯೋಜಕರು, ತಾಂತ್ರಿಕ ಸಹಾಯಕರು (ಸಿಎಲ್, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ) ಆಡಳಿತ ಸಹಾಯಕರು, ಡಿ.ಇ.ಓ. ಅನುಷ್ಠಾನ ಇಲಾಖೆಯಡಿ ಡಿ.ಇ.ಓ.ಕಂ.ಕೋಆರ್ಡಿನೇಟರ್, ಜಿಕೆಎಂ, ಎಫ್‌ಎಂ ಮತ್ತು ಬಿಎಫ್ಟಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಕಳೆದ ಜನವರಿ ತಿಂಗಳಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿರುವುದಿಲ್ಲ. ಇದರಿಂದ ಎಲ್ಲಾ ನೌಕರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ ಎಂದು ಎಫ್‌ಎ ರವಿ ಗುತ್ತೇದಾರ್ ಸೂಲಹಳ್ಳಿ ಕಳವಳ ವ್ಯಕ್ತಪಡಿಸಿದರು.
ಇನ್ನೂ ಎರಡು ದಿನಗಳಲ್ಲಿ ವೇತನ ಪಾವತಿಯಾಗದಿದ್ದರೆ ನಮ್ಮೆಲ್ಲ ಕೆಲಸ-ಕಾರ್ಯಗಳನ್ನು ನಿಲ್ಲಿಸಿ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.
ನರೇಗಾ ನೌಕರರಾದ ಗೋಪಾಲ ಚವ್ಹಾಣ, ವಿಶ್ವನಾಥ ಕಲಸಕರ್, ಶೇಖ್ ಅಲ್ಫಾಕ್, ವೀರೇಂದ್ರ ಬಿರಾದಾರ, ಶಿವರಾಜ್, ವಾಸೀಮ್, ಗಣೇಶ್, ಸಿದ್ದಣ್ಣ, ರೇವಣಸಿದ್ದ, ಮಲ್ಲಮ್ಮ, ಕಾಯಕ ಮಿತ್ರ ಗಿಡ್ಡಮ್ಮ ಪವಾರ್, ಶ್ರೀದೇವಿ ಯಾಗಾಪುರ ಸುಮಿತ್ರಾ, ತೋಟಮ್ಮ ನಾಲವಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿತ್ತಾಪುರ ತಾಲೂಕು ಪಂಚಾಯತ್ ಕಾರ್ಯಾನಿರ್ವಹಕ ಅಧಿಕಾರಿ ಮುಹಮ್ಮದ್ ಅಕ್ರಾಮ್ ಪಾಷಾ ಮನವಿ ಪತ್ರ ಸ್ವೀಕರಿಸಿದರು. ಮನರೇಗಾ ತಾಲೂಕು ಸಹಾಯಕ ನಿರ್ದೇಶಕ ಪಂಡಿತ್ ಸಿಂಧೆ ಇದ್ದರು.