×
Ad

ಕುರ್ಚಿಗೆ ಕಂಟಕ ಬಂದಾಗ ಸಿಎಂ ಜಾತಿಗಣತಿ, ಕಾಂತರಾಜು ವರದಿ ಬಗ್ಗೆ ಮಾತನಾಡುತ್ತಾರೆ : ಬಿ.ವೈ ವಿಜಯೇಂದ್ರ

Update: 2025-09-17 20:43 IST

ಬಿ.ವೈ.ವಿಜಯೇಂದ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವಾಗ ತಮ್ಮ ಕುರ್ಚಿಗೆ ಕಂಟಕ ಎದುರಾಗುತ್ತದೆಯೋ, ಆಗ ಮಾತ್ರ ಜಾತಿಗಣತಿ ಹಾಗೂ ಕಾಂತರಾಜು ವರದಿಯ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ನೀಡುವ ಬದಲು, ಜಾತಿಗಣತಿ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸಕ್ಕೆ ಸಿಎಂ ಮುಂದಾಗಿದ್ದಾರೆ ಎಂದರು.

ಈ ಹಿಂದೆಯೂ ವೀರಶೈವ ಲಿಂಗಾಯತ ಧರ್ಮವನ್ನು ಬಿಟ್ಟು ಲಿಂಗಾಯತ ಪ್ರತ್ಯೇಕ ಧರ್ಮ ಪ್ರಾರಂಭಿಸುವ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚಿದ್ದರು. ಈಗ ಮತ್ತೆ ಜಾತಿ ಜನಗಣತಿ ಮೂಲಕ ಸಮಾಜಗಳ ನಡುವೆ ವಿಭಜನೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಶೂನ್ಯವಾಗಿದ್ದು, ಬೆಳೆ ಹಾನಿಯಿಂದ ರೈತರು, ಉದ್ಯೋಗ ಸಿಗದೇ ಯುವಕರು ಸಂಕಷ್ಟದಲ್ಲಿದ್ದಾರೆ. ಇವರ ಪರವಾಗಿ ಸಿಎಂ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿಗಣತಿ ನಡೆಸುವ ಅಧಿಕಾರ ಯಾವುದೇ ರಾಜ್ಯ ಸರ್ಕಾರಕ್ಕಿಲ್ಲ. ಅದು ಕೇಂದ್ರ ಸರ್ಕಾರಕ್ಕಷ್ಟೇ ಸೇರಿದೆ. ಹೀಗಾಗಿ ಜಾತಿಗಣತಿ ಹೆಸರಿನಲ್ಲಿ ಸಮಾಜವನ್ನು ವಿಭಜಿಸಲು ಮುಂದಾಗಿರುವ ಈ ಸರ್ಕಾರ ತಕ್ಷಣವೇ ಈ ಕ್ರಮವನ್ನು ಕೈಬಿಡಬೇಕು ಎಂದರು.

ಕಾಂಗ್ರೆಸ್‌ ನವರು ಪ್ರತಿಯೊಂದು ವಿಚಾರಕ್ಕೂ ಕೇಂದ್ರದ ಕಡೆಗೆ ಬೊಟ್ಟು ತೋರಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಎಲ್ಲದಕ್ಕೂ ಕೇಂದ್ರದತ್ತ ಬೆರಳು ತೋರಿಸುತ್ತಿದ್ದರೆ, ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರ ಹಾಡಿ ಹೊಗಳುತ್ತಿದ್ದರೂ, ಶೈಕ್ಷಣಿಕವಾಗಿ ಈ ಪ್ರದೇಶ ಇನ್ನೂ ಹಿಂದೆ ಉಳಿದಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News