ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ತೊಡಗಿದೆ : ಬಿ.ವೈ.ವಿಜಯೇಂದ್ರ
ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಶೂನ್ಯ ಅಭಿವೃದ್ಧಿಯ ಸರ್ಕಾರದ ಹೊಣೆಗಾರಿಕೆಯನ್ನು ಸಿಎಂ ಸಿದ್ದರಾಮಯ್ಯ ವಹಿಸಿಕೊಂಡಿದ್ದು, ಈ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಶನಿವಾರ ನಗರದ ಜೇವರ್ಗಿ ರಸ್ತೆಯಲ್ಲಿನ ಕಮಿತಕರ್ ಭವನದಲ್ಲಿ ಭಾರತೀಯ ಜನತಾ ಪಕ್ಷ ಕಲಬುರಗಿ ವಿಭಾಗದ (ಕಲಬುರಗಿ ಗ್ರಾಮಾಂತರ, ಕಲಬುರಗಿ ನಗರ, ಬೀದರ್ ಹಾಗೂ ಯಾದಗಿರಿ) ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ, ತನ್ನ ಹೈಕಮಾಂಡ್ ಗೆ ಎಟಿಎಂ ಆಗಿ ಪರಿವರ್ತನೆಗೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದು ಹೋಗಿದೆ. ಸಿಎಂ ಸಿದ್ದರಾಮಯ್ಯ 16-17 ಬಾರಿ ಬಜೆಟ್ ಮಂಡಿಸಿದ್ದಾರೆ ಎಂಬ ಕಾರಣಕ್ಕೆ ರಾಜ್ಯದ ಜನರು ಅಧಿಕಾರಕ್ಕೆ ತಂದು ಇದೀಗ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಏನೇ ಕೆಲಸವಾಗಬೇಕು ಎಂದರೆ ಹಣ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯೇ ಉದಾಹರಣೆ ಎಂದು ವಿವರಿಸಿದರು.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ಅವರು, ಅಹಿಂದ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಕುಟುಂಬ ಸಮೇತ ಸಿಕ್ಕಿ ಬಿದ್ದ ತಕ್ಷಣವೇ 14 ಸೈಟ್ ವಾಪಸ್ ಕೊಟ್ಟಿದ್ದಾರೆ. ಗ್ಯಾರಂಟಿಗಳಿಗೆ ಹಣ ಸರಿದೂಗಿಸುವ ನಿಟ್ಟಿನಲ್ಲಿ ಇದೀಗ ಬೀದಿ ಬದಿಯ ವ್ಯಾಪಾರಿಗಳಿಗೂ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ರಾಜ್ಯದ ರೈತರ, ಬಡವರ ಹಾಗೂ ಸಾಮಾನ್ಯ ಜನರ ಜೀವನವನ್ನು ನರಕಕ್ಕೆ ತಳ್ಳಿದ್ದು, ಕಾಂಗ್ರೆಸ್ ಸರ್ಕಾರದ ಬಣ್ಣವನ್ನು ನಾವೆಲ್ಲರೂ ಜೊತೆಯಾಗಿ ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 11 ವರ್ಷಗಳ ಆಡಳಿತದ ವೈಖರಿ ಬಗ್ಗೆ ಇಡೀ ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. 2014ರ ಮುಂಚೆ ಯುಪಿಎ ಅವಧಿಯಲ್ಲಿ ಬರೀ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯ ಸಿಕ್ಕಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದರಿಂದಲೇ ಭಾರತ ಇಂದು ವಿಶ್ವದ 4ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣವಾಗಿದೆ. ಅನೇಕ ಕ್ರಾಂತಿಕಾರಿ ಯೋಜನೆ ಜಾರಿಗೆ ತರುವ ಮೂಲಕ ಮುಂಬರುವ 2047ಕ್ಕೆ ನಮ್ಮ ದೇಶ ವಿಕಸಿತ ಭಾರತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸ್ವಾಗತಿಸಿದರು. ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಕಾರ್ಯದರ್ಶಿ, ಶಾಸಕ ಬಸವರಾಜ ಮತ್ತಿಮಡು, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಅವಿನಾಶ್ ಜಾಧವ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಬೀದರ್ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ,ಮಾಜಿ ಸಂಸದ ಡಾ.ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ,ಬಿ.ಜಿ.ಪಾಟೀಲ್,ಎಂ.ಜಿ.ಮೂಳೆ, ಪ್ರತಾಪ್ ಸಿಂಹ ನಾಯಕ್,ಲಲಿತಾ ಅನಪೂರ,ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್, ರಾಜಕುಮಾರ್ ಪಾಟೀಲ್, ಸುಭಾಷ ಗುತ್ತೇದಾರ್, ಬಾಬುರಾವ್ ಚೌಹಾಣ್, ಅಮರನಾಥ ಪಾಟೀಲ್,ಗುಂಡಪ್ಪ ವಕೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಈಶ್ವರ್ ಸಿಂಗ್ ಠಾಕೂರ್, ನಿತೀನ್ ಗುತ್ತೇದಾರ್, ಅಮಿನ್ ರೆಡ್ಡಿ, ಚಂದಮ್ಮ ಪಾಟೀಲ್, ಶಶಿಕಲಾ ಟೆಂಗಳಿ, ಡಾ.ಸುಧಾ ಹಾಲಕಾಯಿ, ಭಾಗೀರಥಿ ಗುನ್ನಾಪುರ್, ಬೀದರ್ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಉಲ್ಲಾಸಿನಿ ಮುದ್ದಾಳೆ ಸೇರಿದಂತೆ ಮತ್ತಿತರರು ಇದ್ದರು.