ಅಫಜಲಪುರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ದತ್ತು ಶಿವಣಗಿ ಆಗ್ರಹ

ಭೀಮಾ ನದಿಗೆ 15 ಟಿಎಂಸಿ ನೀರು ಹರಿಸಿ, ಕೃಷಿ ಸಾಲ ಮನ್ನಾ ಮಾಡಲು ಒತ್ತಾಯ

Update: 2026-07-18 15:43 IST

ಅಫಜಲಪುರ : 2026-27ನೇ ಸಾಲಿನಲ್ಲಿ ಅಫಜಲಪುರ ತಾಲೂಕು ಹಾಗೂ ಕಲಬುರಗಿ ಜಿಲ್ಲೆಯನ್ನು ಭೀಕರ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಭೀಮಾ ನದಿಗೆ ತಕ್ಷಣ ನೀರು ಹರಿಸಬೇಕು ಹಾಗೂ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚೂನಪ್ಪಾ ಪೂಜೇರಿ ಬಣ) ತಾಲೂಕು ಅಧ್ಯಕ್ಷ ದತ್ತು ಶಿವಣಗಿ ಆಗ್ರಹಿಸಿದರು.

ರಾಜ್ಯ ಸರ್ಕಾರಕ್ಕೆ ತಹಸೀಲ್ದಾರರ ಮೂಲಕ ಜ್ಞಾಪನಾ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಮುಂಗಾರು ಬಿತ್ತನೆ ಕುಂಠಿತಗೊಂಡಿದ್ದು, ಬಿತ್ತನೆಯಾದ ಶೇ.70ಕ್ಕೂ ಹೆಚ್ಚು ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ ಎಂದು ಹೇಳಿದರು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‌ಗಳು ಬತ್ತಿವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ತೀವ್ರ ಅಭಾವ ಎದುರಾಗಿದ್ದು, ಜೀವನಾಡಿಯಾದ ಭೀಮಾ ನದಿಯೂ ಸಂಪೂರ್ಣ ಒಣಗಿದೆ. ಇದರಿಂದ ಬ್ಯಾರೇಜ್‌ಗಳು ಹಾಗೂ ಕುಡಿಯುವ ನೀರಿನ ಯೋಜನೆಗಳಿಗೂ ಸಂಕಷ್ಟ ಉಂಟಾಗಿದೆ. ಆದ್ದರಿಂದ ಮಹಾರಾಷ್ಟ್ರದ ಉಜ್ಜನಿ ಜಲಾಶಯ ಅಥವಾ ಇತರೆ ಮೂಲಗಳಿಂದ ತಕ್ಷಣ 15 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಬೇಕು ಎಂದು ಒತ್ತಾಯಿಸಿದರು.

ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬ್ಯಾಂಕುಗಳಿಂದ ಸಾಲ ವಸೂಲಾತಿ ನೋಟಿಸ್‌ಗಳು ಬರುತ್ತಿವೆ. ಹೀಗಾಗಿ ಎಲ್ಲಾ ಕೃಷಿ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು, ಶೂನ್ಯ ಬಡ್ಡಿದರದಲ್ಲಿ ಹೊಸ ಕೃಷಿ ಸಾಲ ನೀಡಬೇಕು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತ ಮೇವಿನ ಬ್ಯಾಂಕ್ ಆರಂಭಿಸಬೇಕು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಳಪ್ಪ ಸುತಾರ, ಶಿದ್ರಾಮಪ್ಪ ಆವೇರಿ, ರಾಜು ಜೇವರ್ಗಿ, ಭೇಶಂಕರಾಯ ಶಿವಣಗಿ, ವಿಠ್ಠಲ್ ನಾಯ್ಕೋಡಿ, ಗೌಡಪ್ಪಗೌಡ ಆವೇರಿ, ಈರಣ್ಣ ಸುತಾರ, ಭಾಗಣ್ಣ ಸುತಾರ, ಸಿದ್ದಪ್ಪ ಜೇವರ್ಗಿ, ಶಿವಪುತ್ರ ಕಲ್ಲೂರ, ಶಿವಪ್ಪ ಬಡದಾಳ, ಕಾಂತಪ್ಪ ಹುಲ್ಲೂರ, ನಿಂಗಣ್ಣ ಜೇವರ್ಗಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News