Aland | ಬರ ಘೋಷಣೆ, ರೈತರ ಸಾಲಮನ್ನಾ, ಬೆಳೆ ವಿಮೆ ವಿತರಣೆಗೆ ಒತ್ತಾಯ

Update: 2026-07-18 18:09 IST

ಆಳಂದ: ಮಳೆಯ ಅಭಾವದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಿಸಿ, ರೈತರ ಸಾಲಮನ್ನಾ ಮಾಡಬೇಕು ಹಾಗೂ ಕಳೆದ ಸಾಲಿನ ಎರಡನೇ ಕಂತಿನ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಾಲೂಕು ಕೃಷಿಕ ಸಮಾಜ ಆಗ್ರಹಿಸಿದೆ.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ ದಂಗಾಪುರ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಏಕಮತದಿಂದ ನಿರ್ಧರಿಸಲಾಯಿತು. ಇದೇ ವೇಳೆ ಪಟ್ಟಣದಲ್ಲಿ ಕೃಷಿಕ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಹಾಗೂ ಅನುದಾನ ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ ದಂಗಾಪುರ, ಮಳೆಯ ಕೊರತೆಯಿಂದ ರೈತರು ಬೆಳೆ ಬೆಳೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ತಕ್ಷಣ ಬರಗಾಲ ಘೋಷಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಕಳೆದ ಸಾಲಿನ ಬೆಳೆ ವಿಮೆ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಕೃಷಿಕ ಸಮಾಜದ ಸಭೆಗಳು ನಿಯಮಿತವಾಗಿ ನಡೆಯಬೇಕು. ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ನಿರಂತರ ಪ್ರಯತ್ನಿಸಬೇಕು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ಕಾರದ ಯೋಜನೆಗಳ ನೈಜ ಪ್ರಯೋಜನ ರೈತರಿಗೆ ತಲುಪಲಿದೆ ಎಂದು ಹೇಳಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಮಾತನಾಡಿ, ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳು, ತಾಂತ್ರಿಕ ಮಾಹಿತಿ ಹಾಗೂ ಸೌಲಭ್ಯಗಳು ಪರಿಣಾಮಕಾರಿಯಾಗಿ ರೈತರ ಮನೆಬಾಗಿಲಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮುಂಗಾರು ಮಳೆ ಪರಿಸ್ಥಿತಿ, ಬಿತ್ತನೆ ಪ್ರಗತಿ ಹಾಗೂ ಬೆಳೆ ವಿಮೆ ಯೋಜನೆ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಂದ್ರನಾಥ ಪನ್ನಪಗೋಳ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಲ್ಲಪ್ಪ ಇಂಗಳೆ ಹಾಗೂ ರೇಷ್ಮೆ ಇಲಾಖೆಯ ಶಿವಪುತ್ರ ಅವರು ತಮ್ಮ ಇಲಾಖೆಗಳ ಯೋಜನೆಗಳು ಮತ್ತು ರೈತರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರಿಸಿದರು.

ಸಭೆಯಲ್ಲಿ ರಾಜಶೇಖರ ಪಾಟೀಲ ಚಿತಲಿ, ಮಹಾದೇವ ಹತ್ತಿ, ವೀರಣ್ಣ ಹೊನ್ನಶೆಟ್ಟಿ, ರೈತ ಮುಖಂಡ ಮೋಹನಗೌಡ ಪಾಟೀಲ, ರಾಜಶೇಖರ ಲಮಶೆಟ್ಟಿ, ಚಂದ್ರಶೇಖರ ಪಾಟೀಲ ಕೊರಳ್ಳಿ, ಸಿದ್ರಾಮಪ್ಪ ಪಾಟೀಲ, ಮಲ್ಲಿಕಾರ್ಜುನ ಧನಶ್ರೀ, ಕುಪೇಂದ್ರ ವಿ. ಪಾಟೀಲ, ಶರಬಸಪ್ಪ ಪಾಟೀಲ ಸೇರಿದಂತೆ ಕೃಷಿಕ ಸಮಾಜದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News