Kalaburagi | ಏಕ್ ಭಾರತ್–ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಜಿಎಸ್‌ಟಿ ಸುಧಾರಣೆಗಳೇ ಬುನಾದಿ : ಪ್ರೊ.ಆರ್.ಆರ್.ಬಿರಾದಾರ

ಸಿಯುಕೆಯಲ್ಲಿ ಐಸಿಎಸ್‌ಎಸ್‌ಆರ್ ಸಹಯೋಗದ ರಾಷ್ಟ್ರೀಯ ಸಮ್ಮೇಳನ ಸಮಾರೋಪ

Update: 2026-07-18 18:14 IST

ಕಲಬುರಗಿ: “ಏಕ್ ಭಾರತ್–ಶ್ರೇಷ್ಠ ಭಾರತ್” ಪರಿಕಲ್ಪನೆ ಹಾಗೂ ವಿಕಸಿತ ಭಾರತ್–2047 ಗುರಿ ಸಾಕಾರಗೊಳ್ಳಲು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸುಧಾರಣೆಗಳು ಬಲಿಷ್ಠ ಅಡಿಪಾಯವಾಗಿದ್ದು, ದೇಶದ ಆರ್ಥಿಕ ಏಕೀಕರಣ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಹೇಳಿದರು.

ಸಿಯುಕೆಯ ಕಾನೂನು ವಿಭಾಗವು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‌ಎಸ್‌ಆರ್), ನವದೆಹಲಿ ಸಹಯೋಗದಲ್ಲಿ ಆಯೋಜಿಸಿದ್ದ “ಜಿಎಸ್‌ಟಿ ಸುಧಾರಣೆಗಳು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಪರಿವರ್ತನೆ: ವಿಕಸಿತ ಭಾರತ್–2047ರ ಸಾಧನೆಯ ಮಾರ್ಗ” ವಿಷಯದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಿಎಸ್‌ಟಿ ದೇಶದ ಅತಿದೊಡ್ಡ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿದ್ದು, ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವುದರ ಜೊತೆಗೆ ದೇಶದ ಮಾರುಕಟ್ಟೆಯನ್ನು ಏಕೀಕರಿಸಿದೆ. ಸಹಕಾರಿ ಒಕ್ಕೂಟವನ್ನು ಬಲಪಡಿಸುವ ಮೂಲಕ ಕೈಗಾರಿಕೆ, ವ್ಯಾಪಾರ ಮತ್ತು ಹೂಡಿಕೆ ವಲಯಗಳಿಗೆ ಹೊಸ ಚೈತನ್ಯ ನೀಡಿದೆ ಎಂದು ಹೇಳಿದರು.

ಜಾಗತಿಕ ಆರ್ಥಿಕ ಹಾಗೂ ಭೌಗೋಳಿಕ-ರಾಜಕೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಸ್ಥಿರ ಪ್ರಗತಿ ಸಾಧಿಸುತ್ತಿದ್ದು, 2017–18ರಲ್ಲಿ ಶೇ.6.1ರಷ್ಟಿದ್ದ ಜಿಡಿಪಿ ಬೆಳವಣಿಗೆ 2025–26ರಲ್ಲಿ ಶೇ.7.7ಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆ ಮತ್ತು ಹೂಡಿಕೆ ಹೆಚ್ಚಳದಿಂದ ನಿರುದ್ಯೋಗ ಪ್ರಮಾಣವೂ ಇಳಿಕೆಯಾಗಿದೆ ಎಂದು ತಿಳಿಸಿದರು.

2047ರ ವೇಳೆಗೆ ಭಾರತವನ್ನು 30ರಿಂದ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪಿಸಲು ನಿರಂತರ ಆರ್ಥಿಕ ಸುಧಾರಣೆಗಳು, ಹಣಕಾಸಿನ ಶಿಸ್ತು, ದೂರದೃಷ್ಟಿಯ ನೀತಿಗಳು ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಸುನೀಲ್ ಕುಮಾರ್ ಟಿ.ಕೆ., ಜಿಎಸ್‌ಟಿ ಜಾರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯದಲ್ಲಿ ಗಣನೀಯ ಏರಿಕೆಯಾಗಿದ್ದು, ಆ ಸಂಪನ್ಮೂಲಗಳನ್ನು ಮೂಲಸೌಕರ್ಯ ಮತ್ತು ಸಾರ್ವಜನಿಕ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕರೂ ಸ್ವಯಂಪ್ರೇರಿತವಾಗಿ ತೆರಿಗೆ ಪಾವತಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ತಜ್ಞರು ಜಿಎಸ್‌ಟಿ ಸುಧಾರಣೆಗಳ ಕುರಿತ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾನೂನು ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ವಿಭಾಗದ ಮುಖ್ಯಸ್ಥ ಡಾ. ಅನಂತ ಚಿಂಚುರೆ, ಸಂಚಾಲಕ ಡಾ. ಜಯಂತ ಬೋರುವಾ, ಶರಣಬಸವ ವಿಶ್ವವಿದ್ಯಾಲಯದ ಡಾ. ರವಿ ಆವಂತಿ, ಡಾ. ರೇಣುಕಾ ಗುಬ್ಬೆವಾಡ, ಡಾ. ಕೆ.ಎಂ. ಕೃಷ್ಣ ಶೇಖರ ಶರ್ಮಾ, ಡಾ. ವೈಷ್ಣವಿ ನಾರಾಯಣಿ, ಡಾ. ನಿಖಿತಾ ಚೌದರಿ, ಡಾ. ಜುನುದಾಸ ಸೇರಿದಂತೆ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿವಿಧ ನಿಕಾಯಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ಡಾ. ಜಗದೀಶಚಂದ್ರ ಟಿ.ಜಿ. ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News