Kalaburagi | ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ಸಾಮ್ರಾಟ್ : ಉಮಾಶ್ರೀ

31 ಹಿರಿಯ ಪ್ರವಚನಕಾರರಿಗೆ ‘ಪ್ರವಚನ ಪ್ರವೀಣ’ ಪ್ರಶಸ್ತಿ ಪ್ರದಾನ

Update: 2026-07-17 21:49 IST

ಕಲಬುರಗಿ : ನಾಡಿನ ಗಾನಯೋಗಿ ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಕ್ಷೇತ್ರದ ಸಾಮ್ರಾಟ್ ಆಗಿದ್ದು, ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚಿತ್ತಾಪುರದ ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಪುಟ್ಟರಾಜ ಕೊಟ್ಟ ಜ್ಞಾನ – ಗಾನ, ಮಾನದಾತ ನಾದದ ನವನೀತ’ ವಿಶೇಷ ಕಾರ್ಯಕ್ರಮದಲ್ಲಿ 31 ಹಿರಿಯ ಪ್ರವಚನಕಾರರಿಗೆ ‘ಪ್ರವಚನ ಪ್ರವೀಣ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪುಟ್ಟರಾಜ ಕವಿ ಗವಾಯಿಗಳು ಅಂತರಾತ್ಮದ ಶಕ್ತಿ ತುಂಬಿದ ಮಹಾನ್ ವ್ಯಕ್ತಿತ್ವವಾಗಿದ್ದು, ಅವರಲ್ಲಿ ದೈವಿಕ ಶಕ್ತಿಯ ಅಂಶಗಳಿದ್ದವು. ದೃಷ್ಟಿಹೀನರಾಗಿದ್ದರೂ ಸಂಗೀತ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಅಪೂರ್ವ ವೈಭವ ತಂದುಕೊಟ್ಟ ಮಹನೀಯರು ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರು, ನೊಂದ ಮನಸ್ಸಿಗೆ ಸಾಂತ್ವನ ನೀಡುವುದು ಒಳ್ಳೆಯ ಮಾತುಗಳೇ ಆಗಿದ್ದು, ಪ್ರವಚನಕಾರರ ಸೇವೆ ಸಮಾಜಕ್ಕೆ ಅಮೂಲ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ವೈಜನಾಥ ಪಾಟೀಲ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗಾನಯೋಗಿ ಪುಟ್ಟರಾಜ ಕವಿ ಗವಾಯಿಗಳು ಸಂಗೀತ, ಸಾಹಿತ್ಯ ಹಾಗೂ ಸಮಾಜ ಸೇವೆಯ ಮೂಲಕ ಸಾವಿರಾರು ಜನರ ಬದುಕಿಗೆ ಬೆಳಕಾದ ಮಹಾನ್ ಸಾಧಕರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಚನ್ನಮಲ್ಲಯ್ಯ ಹಿರೇಮಠ ಜೇವರ್ಗಿ, ನಗನೂರಿನ ಜಗದೀಶ ಶರಣರು, ಮಹಿಳಾ ಸಂಘಟಕಿ ಜಯಶ್ರೀ ಮುಚಳಂಬಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷೆ ಶ್ವೇತಾ ಆರ್. ಪಾಟೀಲ, ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ದಶಕಗಳಿಂದ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವ 31 ಮಂದಿ ಹಿರಿಯ ಮತ್ತು ಖ್ಯಾತ ಪ್ರವಚನಕಾರರನ್ನು ‘ಪ್ರವಚನ ಪ್ರವೀಣ’ ಪ್ರಶಸ್ತಿಯಿಂದ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News