×
Ad

ಕಲಬುರಗಿಯಲ್ಲಿ ಎ.16 ರಂದು ನಡೆಯುವ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಲು ಡಿಸಿ ಕರೆ

Update: 2025-04-04 19:52 IST

ಕಲಬುರಗಿ : ಜಿಲ್ಲೆಯಲ್ಲಿ ಎ.16 ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದ್ದು, ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಹೇಳಿದರು.

ಶುಕ್ರವಾರದಂದು ಪಿಡಿಎ. ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕಲಬುರಗಿ ನಗರದ ಎಲ್ಲ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ ಈಗಾಗಲೇ 5,083 ಅಭ್ಯರ್ಥಿಗಳು ಹಾಗೂ 190 ಸ್ಥಳೀಯ ಮತ್ತು ಎಂ.ಎನ್.ಸಿ ಕಂಪನಿಗಳು ಆನ್‌ಲೈನ್ ಮೂಲಕ ನೋಂದಣಿಯಾಗಿವೆ ಎಂದು ತಿಳಿಸಿದರು.

ಎ.10 ರವರೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕು. ಈ ಉದ್ಯೋಗ ಮೇಳದಲ್ಲಿ ಎಷ್ಟು ಜನ ಬಂದು ಹೋದರು ಎನ್ನುವುದಕ್ಕಿಂತ ಈ ಭಾಗದ ಎಷ್ಟು ಜನರಿಗೆ ಉದ್ಯೋಗ ಲಭಿಸಿದೆ ಎಂಬುವುದು ಮುಖ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಅಬ್ದುಲ್ ಅಜೀಮ್ ಮಾತನಾಡಿ, ಈ ಭಾಗದ ಇಬ್ಬರು ಸಚಿವರು ಮತ್ತು ಜಿಲ್ಲಾಡಳಿತ ಅಧಿಕಾರಿಗಳ ಸಹಕಾರದಿಂದ ಉದ್ಯೋಗ ಮೇಳ ಆಯೋಜನೆ ಮಾಡುತ್ತಿದ್ದು, ಸಂಪನ್ಮೂಲ ತರಬೇತಿದಾರರ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದುಕೊಂಡು ಈ ಭಾಗದ ಹೆಚ್ಚಿನ ಯುವಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಬೆಂಗಳೂರು-ಹೈದ್ರಾಬಾದ ನಗರಗಳಿಗೆ ಉದ್ಯೋಗದ ಸಂದರ್ಶನಕ್ಕಾಗಿ ಹೋಗುವುದಕ್ಕಿಂತ ಕಲಬುರಗಿಯಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಎಕ್ಸೆಲ್ ಕಾರ್ಪ ಕಂಪನಿಯ ಆಧಿಕೇಶ್ವರ, ವಿದ್ಯಾರ್ಥಿಗಳಿಗೆ ಸೆಮಿನಾರ್ ನೀಡಿ ಯಾವುದೇ ಒಂದು ಕಾರ್ಪೋರೆಟ್ ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಯು ವೃತ್ತಿ ಕೌಶಲ್ಯಗಳು ಕಲಿತುಕೊಂಡಿರಬೇಕು ಅಂದಾಗ ಮಾತ್ರ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗುಬಾಯಿ ಸ್ವಾಗತಿಸಿದರು.

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ಧರಾಮ ಪಾಟೀಲ ವಂದಿಸಿದರು, ಕೌಶಲ್ಯ ಅಭಿವೃದ್ಧಿ ಇಲಾಖೆ ಕಿರಿಯ ತರಬೇತಿ ಅಧಿಕಾರಿ ಬಸನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪುರಷ ಐಟಿಐ. ಕಾಲೇಜಿನ ಪ್ರಾಂಶುಪಾಲರಾದ ಮುರಳಿಧರ ರತ್ನಗಿರಿ, ಪಿಡಿಎಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಎಸ್.ಭಾರತಿ, ಉಪನ್ಯಾಸಕ ನಾಗೇಶ ಸಾಲಿಮಠ, ಎಕ್ಸಲ್ ಕಂಪನಿಯ ಟೀಂ ಲೀಡರ್ ಅಶ್ವಥ, ಸೇರಿದಂತೆ ಎಲ್ಲ ಇಂಜಿನಿಯರಿಂಗ್ ಉಪನ್ಯಾಸಕರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News