ಬಿಜೆಪಿ, ಆರೆಸ್ಸೆಸ್‌ನವರು ವೋಟ್‌ಗಾಗಿ ಅಂಬೇಡ್ಕರ್ ಅವರ ಫೋಟೋಗಳನ್ನು ಬಳಸುತ್ತಿದ್ದಾರೆ : ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಬಿಜೆಪಿ, ಆರೆಸ್ಸೆಸ್ ನವರು ಈ ಹಿಂದೆ ಅಂಬೇಡ್ಕರ್ ಅವರ ಫೋಟೋ ಇಡುತ್ತಿರಲಿಲ್ಲ, ಈಗೀಗ ವೋಟ್ ಗಾಗಿ ಅವರ ಫೋಟೋಗಳನ್ನು ಬಳಸುತ್ತಿದ್ದಾರೆ. ಮನುವಾದಿಗಳು ಇಂದು ಹಳ್ಳಿ ಹಳ್ಳಿಗೆ ಹೋಗಿ ಮನುಸ್ಮೃತಿ ನಮ್ಮ ಸಂವಿಧಾನ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ ಅಫಜಲಪುರ ತಾಲ್ಲೂಕಿನ ಗೊಬ್ಬೂರ(ಬಿ) ಗ್ರಾಮದಲ್ಲಿ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಮನುವಾದಿಗಳು ಇಂದು ಹಳ್ಳಿ ಹಳ್ಳಿಗೆ ಹೋಗಿ ಮನುಸ್ಮೃತಿ ನಮ್ಮ ಸಂವಿಧಾನ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಂವಿಧಾನ ನಮಗೆ ಎಂದಿಗೂ ಶ್ರೇಷ್ಠ, ಅದಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ, ಆರೆಸ್ಸೆಸ್ ನವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಅವರಿಂದ ಎಚ್ಚರಗೊಂಡು ಸಂವಿಧಾನ ರಕ್ಷಣೆ ಮಾಡುವ ಹೊಣೆ ನಮ್ಮದಾಗಿದೆ ಎಂದರು.
'ಚುನಾವಣೆಯಲ್ಲಿ ನನನ್ನು ಸೋಲಿಸಲು ಸಾವರ್ಕರ್ ಮತ್ತು ಕಮ್ಯುನಿಷ್ಟ್ ಪಕ್ಷದ ಎಸ್.ಎ.ಡಾಂ ಅವರ ಕೈವಾಡವಿತ್ತು' ಎಂದು ಅಂಬೇಡ್ಕರ್ ಅವರು ಜನವರಿ 18, 1952ರಲ್ಲಿ ಕಮಲ್ ಕಾಂತ್ ಚಿಟ್ಟೆಗೆ ಸ್ವತಃ ಅವರೇ ಬರೆದಿರುವ ತಮ್ಮ ಪತ್ರದಲ್ಲೇ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ʼನನಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದ್ದು, ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಡಾ.ಅಂಬೇಡ್ಕರ್ ಹೇಳಿದ್ದರು.ʼ ಕೆಲವು ಜನರಿಗೆ ಡಾ.ಅಂಬೇಡ್ಕರ್ ಅವರ ಬಗ್ಗೆ ಗೊತ್ತಿಲ್ಲ. ಅವರನ್ನು ಸೋಲಿದವರೇ ಕಾಂಗ್ರೆಸ್ ನವರು ಎಂದು ಬಿಜೆಪಿ ಮುಖಂಡರು ಹೇಳಿಕೊಂಡು ತಿರುಗುತ್ತಿದ್ದಾರೆ, ಇಂತಹ ಹೇಳಿಕೆ ಕೊಡುತ್ತಿರುವ ಈಗಿನ ಬಿಜೆಪಿ ಮುಖಂಡರು ಆಗ ಹುಟ್ಟಿರಲಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಎಂದು ಹೇಳುತ್ತಾರೆ. ನಿಜವಾಗಲೂ ಒಂದು ವೇಳೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ವಿರೋಧಿಯಾಗಿದ್ದರೆ ಅವರನ್ನು ಕಾನೂನು ಮಂತ್ರಿ, ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುತ್ತಿರಲಿಲ್ಲ. ಡಾ.ಅಂಬೇಡ್ಕರ್ ಅವರಿಗೆ ಆರೆಸೆಸ್ಸ್ ಮತ್ತು ಬಿಜೆಪಿಯೇ ವಿರೋಧಿಗಳು ಎಂದು ಹೇಳಿದರು.
ಅಫಜಲಪುರ ಮತಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿಣಮಗೇರಾ ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯ, ಅಣದೂರಿನ ಪೂಜ್ಯ ಭಂತೆ ವರಜ್ಯೋತಿ ಥೆರೋ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಝ್ ಫಾತೀಮಾ, ವಿಧಾನ ಪರಿಷತ್ ಶಾಸಕ ಜಗದೇವ್ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ್, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ಎಸ್.ಕೆ ಕಾಂತಾ, ದಲಿತ ಮುಖಂಡ ಡಿ.ಜಿ ಸಾಗರ್, ಚಂದ್ರಿಕಾ ಪರಮೇಶ್ವರಿ,, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯಕೋಡಿ, ಆರ್.ಕೆ. ಪಾಟೀಲ್, ಮಾಜಿ ಶಾಸಕ ರೆವುನಾಯಕ್ ಬೆಳಮಗಿ, ನೀಲಕಂಠ ರಾವ್ ಮೂಲಗೆ, ಪ್ರಕಾಶ್ ಜಮಾದಾರ್, ಲಚ್ಚಪ್ಪ ಜಮಾದಾರ್, ಡಾ.ಹಣಮಂತರಾವ್ ದೊಡ್ಡಮನಿ, ಅಫ್ತಾಬ್ ಪಟೇಲ್, ಚೇತನ್ ಗೋನಾಳ, ಕಿರಣ್ ದೇಶಮುಖ್, ಶಿವಾನಂದ್ ಮರ್ತೂರು, ದೇವೇಂದ್ರ ಮಾರ್ತೂರು, ಮತೀನ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ, ಅರುಣಕುಮಾರ್ ಪಾಟೀಲ್ ಗೊಬ್ಬೂರ್, ರವಿ ಶೆಟ್ಟಿ, ಮಶಾಕ್ ಪಟೇಲ್, ಸಿದ್ದು ಸಿರಸಗಿ, ಜ್ಯೋತಿ ಮರಗೊಳ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಅರುಣಕುಮಾರ್ ಎಂ.ವೈ.ಪಾಟೀಲ್ ಅವರು ಸ್ವಾಗತಿಸಿದರು. ನವಲಿಂಗ್ ಪಾಟೀಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.