ಸಿಎಂ ಗಾದಿಗಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ಜೋರಾಗಿದೆ: ಬಿ.ವೈ.ವಿಜಯೇಂದ್ರ
ಕಲಬುರಗಿ: ರಾಜ್ಯದಲ್ಲಿ ಮುಂದಿನ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ''ಸಿಎಂ ನಾನಾಗಬೇಕು, ನಾನಾಗಬೇಕು.. '' ಎನ್ನುವ ಪೈಪೋಟಿ ಭರ್ಜರಿಯಾಗಿ ನಡೆಯುತ್ತಿದೆ. ಸರಕಾರದಲ್ಲಿ ಎಲ್ಲವೂ ಕೂಡ ರೇಟ್ ಫಿಕ್ಸಿಂಗ್ ನಡೆಯುತ್ತಿದೆ. ಹಾಗಾಗಿ ಸಿದ್ದರಾಮಯ್ಯ ಅವರ ಕುರ್ಚಿ ಯಾವಾಗ ಅಲ್ಲಾಡುತ್ತದೋ ಯಾವಾಗ ಅವರಿಗೆ ಅಸ್ಥಿರತೆ ಕಾಡುತ್ತದೋ ಅವಾಗೆಲ್ಲಾ ಅವರು ಸಮಾವೇಶ ಮಾಡಿಕೊಂಡು ಬಂದಿದ್ದಾರೆ. ಈಗ ಮೈಸೂರಿನಲ್ಲೂ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅಂದ್ರೆ ಸಮಾವೇಶ, ಸಮಾವೇಶ ಅಂದ್ರೆ ಸಿದ್ದರಾಮಯ್ಯ ಆಗಿದೆ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಅಹಿಂದ ಸಮಾಜವನ್ನು ಮುಂದೆ ಇಟ್ಟುಕೊಂಡು ಹೈಕಮಾಂಡ್ ಗೆ ಬೆದರಿಸುವ ಕುತಂತ್ರ ಮಾಡುತ್ತಿದ್ದಾರೆ. ಕಳೆದ ಎರಡುವರೆ ವರ್ಷದಲ್ಲಿ ಸಿದ್ರಾಮಯ್ಯ ಸರಕಾರದ ಸಾಧನೆ ಶೂನ್ಯವಾಗಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರಕಾರದ ಸಾಧನೆ ನಿಜವೇ ಆಗಿದ್ದರೆ ರಣದೀಪ್ ಸುರ್ಜೆವಾಲ ಅವರು ಪದೇ ಪದೇ ಬಂದು ಶಾಸಕರ ಅಸಮಾಧಾನ ಹೋಗಲಾಡಿಸುವ ಪ್ರಮೇಯ ಇರುತ್ತಿರಲಿಲ್ಲ. ಶಾಸಕರ ಅಸಮಾಧಾನ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಲು ಮತ್ತು ಸಿಎಂ ಬದಲಾವಣೆ ಆದರೆ ಯಾರನ್ನು ಮಾಡಬೇಕು ಎನ್ನುವ ಬಗ್ಗೆ ಶಾಸಕರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಸುರ್ಜೆವಾಲಾ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದರು.
ಐದು ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಅವರು ಹೆಮ್ಮೆಯಿಂದ ಹೇಳಿದ್ದಲ್ಲ, ಬದಲಾಗಿ ಹಾಗೆ ಹೇಳುವ ಮೂಲಕ ಅವರು ಹೈಕಮಾಂಡ್ ಗೆ ನೇರ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಈ ಹಿಂದೆಲ್ಲಾ ಸಿದ್ದರಾಮಯ್ಯ ಅವರಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು. ಆದರೆ ಮೊನ್ನೆ ದೆಹಲಿಗೆ ಹೋದ ಸಿದ್ದರಾಮಯ್ಯ ಗೆ ರಾಹುಲ್ ಗಾಂಧಿ ಅಪಾಯಿಂಟಮೆಂಟ್ ಸಹ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ ಎಂದು ಹೇಳಿದರು.
ದಲಿತರಿಗೆ ಸಿಎಂ ಕುರ್ಚಿ ನೀಡಬೇಕು ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳಿದ್ರೆ ಸಿದ್ದರಾಮಯ್ಯ ಅವರಿಗೆ ಕೋಪ ಬರುತ್ತದೆ. ಜಿ. ಪರಮೇಶ್ವರ್ ರಿಗೆ ಅನ್ಯಾಯ ಮಾಡಿದರು. ಈಗಾಗಲೇ ಜಿ.ಪರಮೇಶ್ವರ ಅವರಿಗೆ ಹೇಗೆ ಅನ್ಯಾಯ ಆಗಿದೆ ಅಂತ ಚರ್ಚೆ ಆಗಿದೆ ಎಂದರು.
ಎರಡು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ದಕ್ಷಿಣಕನ್ನಡದಲ್ಲಿ ನಮ್ಮ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸೋ ಪ್ರಯತ್ನ ಮಾಡಿದ್ದರೂ ಅದು ಸಫಲವಾಗಲಿಲ್ಲ. ನಂತರ ಭರತ್ ಶೆಟ್ಟಿ ಮೇಲೆ ಎಫ್ ಐಆರ್ ಮಾಡಿದ್ರು. ಇದೇ ರೀತಿ ಬೇರೆ ಬೇರೆ ಶಾಸಕರ ಮೇಲೆ ಎಫ್ಐಆರ್ ಮಾಡಿ ಹೆದರಿಸುವ ಕೆಲಸ ಮಾಡ್ತಿದ್ದಾರೆ.
ಹಿಂದುಳಿದ ನಾಯಕ ಭೈರತಿ ಬಸವರಾಜ ಅವರನ್ನ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಬಸವರಾಜ ಅವರು ತಮ್ಮದೇನು ತಪ್ಪಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ, ದೂರು ಕೊಟ್ಟ ಆ ತಾಯಿಯೇ ಭೈರತಿ ಹೆಸರನ್ನೇ ಹೇಳಿಲ್ಲ ಎಂದಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಸಂಘಟನಾತ್ಮಕ ಸಭೆ:
ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಸಂಘಟನಾತ್ಮಕ ಸಭೆ ಮಾಡುತ್ತಿದ್ದೇವೆ, ಈ ಮೂರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ. ಪಕ್ಷ ಬಲಪಡಿಸಲು ಸಭೆ, ಸಮಾಲೋಚನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿ ಚುನಾವಣೆಗಳು ಬರಲಿವೆ. ಪಕ್ಷ ಬಲಪಡಿಸಲು ಮುಖಂಡರು, ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಈಗಾಗಲೇ ಮೈಸೂರು, ಶಿವಮೊಗ್ಗ ವಿಭಾಗದಲ್ಲಿ ಬಿಜೆಪಿ ಸಂಘಟನಾತ್ಮಕ ಸಭೆ ಮಾಡಿದ್ದೇವೆ. ಇವತ್ತು (ಶನಿವಾರ) ಕಲಬುರಗಿ ಸೇರಿ ಮೂರು ಜಿಲ್ಲೆಗಳನ್ನೊಳಗೊಂಡು ಬಿಜೆಪಿ ಸಂಘಟನಾತ್ಮಕ ಸಭೆ ಜೊತೆಗೆ ಮೋದಿ ಸರ್ಕಾರದ 11 ವರ್ಷಗಳ ಸಾಧನೆ ಬಗ್ಗೆಯೂ ಸಂವಾದ ಮಾಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಚಂದು ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.