ರೌಡಿಶೀಟರ್ ಶ್ರೀಕಾಂತ್ ಶೆಟ್ಟಿಗೆ ಅ.4ರವರೆಗೆ ಕಲಬುರಗಿ ಪ್ರವೇಶ ನಿರ್ಬಂಧ
ಕಲಬುರಗಿ: ನಗರದ ಕೋಟೆ ಎದುರು ನಡೆಯುತ್ತಿರುವ ಹಿಂದೂ ಮಹಾಗಣಪತಿ ಉತ್ಸವದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಾಚರಣೆ ಸದಸ್ಯ ಹಾಗೂ ‘ಬಿ’ ರೌಡಿಶೀಟರ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರಿಗೆ ಅ.4ರವರೆಗೆ ಕಲಬುರಗಿ ನಗರ ಪ್ರವೇಶಿಸದಂತೆ ಉಪ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅ.1ರಂದು ನಡೆಯಲಿರುವ ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ಶ್ರೀಕಾಂತ್ ಶೆಟ್ಟಿ ಅವರನ್ನು ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚೌಕ್ ಪೊಲೀಸ್ ಠಾಣೆ ಹಾಗೂ ಎಸಿಪಿ ಉತ್ತರ ಉಪವಿಭಾಗದ ವರದಿಗಳನ್ನು ಪರಿಶೀಲಿಸಿದ ಬಳಿಕ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧದ ಆದೇಶ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಕಾಂತ್ ಶೆಟ್ಟಿ ವಿರುದ್ಧ ಉಡುಪಿ ವ್ಯಾಪ್ತಿಯಲ್ಲಿ ನಾಲ್ಕು, ಮಂಗಳೂರು ಹಾಗೂ ದಕ್ಷಿಣ ಕನ್ನಡದ ಪುತ್ತೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಹಾಗೂ ಹಿಂದಿನ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪೊಲೀಸ್ ವರದಿಯಲ್ಲಿನ ಅಂಶಗಳನ್ನು ಆದೇಶದಲ್ಲಿ ಪರಿಗಣಿಸಲಾಗಿದೆ.
ಶ್ರೀಕಾಂತ್ ಶೆಟ್ಟಿ ಅವರ ನಗರ ಪ್ರವೇಶದಿಂದ ಕಾನೂನು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿ, ಅವರನ್ನು ಅ.1ರಿಂದ ಅ.4ರವರೆಗೆ ಕಲಬುರಗಿ ನಗರ ಪ್ರವೇಶಿಸದಂತೆ ಆದೇಶ ಹೊರಡಿಸಲಾಗಿದೆ.