Shahabad | ಮಹಿಳೆಯರ ಸ್ವಾವಲಂಬನೆಗೆ ಜ್ಞಾನ ವಿಕಾಸ ಕಾರ್ಯಕ್ರಮಗಳು ವರದಾನ: ವಾಸುದೇವ ಚವ್ಹಾಣ್
ಶಹಾಬಾದ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸೃಜನಶೀಲ ಕಾರ್ಯಕ್ರಮಗಳು ಮಹಿಳೆಯರ ಪಾಲಿಗೆ ವರದಾನವಾಗಿವೆ ಎಂದು ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್ ಹೇಳಿದರು.
ನಗರದ ಭಾರತ ಚೌಕ್ ಬಳಿ ಓಬವ್ವ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸೃಜನಶೀಲ ಕಾರ್ಯಕ್ರಮದಡಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಸಮಾಜದ ಬಗ್ಗೆ ಕಾಳಜಿ ಹೊಂದಿ ಪರಿಸರ ಸ್ವಚ್ಛತೆ, ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯಪಾನ ವರ್ಜನ ಶಿಬಿರ, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಬಡವರಿಗೆ ಆರ್ಥಿಕ ಸಹಾಯ, ವೃದ್ಧರಿಗೆ ವಾತ್ಸಲ್ಯ ಮನೆ, ಪಿಂಚಣಿ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಂಜೀವಿನಿಯಂತಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕಿ ಕಾಶೀಬಾಯಿ ಸಾಲಿಮಠ ಮಾತನಾಡಿ, ಮಹಿಳೆಯರು ಯೋಜನೆಯಡಿ ನೀಡಲಾಗುತ್ತಿರುವ ಉಚಿತ ತರಬೇತಿಯ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಅರ್ಚನಾ ಮಾತನಾಡಿ, ಜ್ಞಾನ ವಿಕಾಸ ಕೇಂದ್ರವು ಮಹಿಳೆಯರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಸಂಪನ್ಮೂಲ ಶಿಕ್ಷಕಿ ಜಗದೇವಿ ಮಾತನಾಡಿದರು. ಸೇವಾ ಪ್ರತಿನಿಧಿ ಗುರುಬಾಯಿ ಕಾರ್ಯಕ್ರಮ ನಿರೂಪಿಸಿದರು.