ವಾಡಿ : ಸಾರ್ವಜನಿಕರ ಸಹಕಾರವಿಲ್ಲದೆ ನಗರದ ನೈರ್ಮಲ್ಯ ಕಾಪಾಡುವುದು ಅಸಾಧ್ಯ. ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳುವ ಅಗತ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದರು.

ಪುರಸಭೆ ವಾಡಿ ಹಾಗೂ ಪೌರನೌಕರರ ಸಂಘದ ಸಹಯೋಗದಲ್ಲಿ ಮಂಗಳವಾರ ಸಾಹೇಬ್ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಪೌರಕಾರ್ಮಿಕರ ದೈಹಿಕ ಶ್ರಮ ಹಾಗೂ ಸೇವೆಯನ್ನು ಯಾವುದರಿಂದಲೂ ಭರ್ತಿ ಮಾಡಲು ಸಾಧ್ಯವಿಲ್ಲ. ಆದರೆ, ಪ್ರಸ್ತುತ ಸಾರ್ವಜನಿಕರಲ್ಲಿ ನೈರ್ಮಲ್ಯದ ಕುರಿತು ಜಾಗೃತಿ ಹಾಗೂ ಸಹಭಾಗಿತ್ವದ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಪೌರಕಾರ್ಮಿಕರ ಮೇಲಿನ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ಸಂಖ್ಯೆ ಇಲ್ಲದಿರುವುದರಿಂದ ಇರುವ ಸಿಬ್ಬಂದಿಯ ಮೇಲೆಯೇ ಕೆಲಸದ ಒತ್ತಡ ಹೆಚ್ಚಾಗಿದೆ. ವಿದ್ಯಾವಂತ ನಾಗರಿಕರೇ ಕೆಲವೊಮ್ಮೆ ಎಲ್ಲೆಂದರಲ್ಲಿ ಕಸ ಎಸೆಯುವ ಮೂಲಕ ನಗರದ ಸ್ವಚ್ಛತೆಗೆ ಧಕ್ಕೆ ತರುತ್ತಿರುವುದು ತೀವ್ರ ಬೇಸರದ ಸಂಗತಿ. ಕಸ ವಿಲೇವಾರಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದೆ. ತ್ಯಾಜ್ಯ ನಿರ್ವಹಣೆಯ ವೆಚ್ಚವೂ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದು ದೇಶದ ಆರ್ಥಿಕತೆಯ ಮೇಲೆಯೂ ಹೊರೆಯಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಮನೆಯಲ್ಲೇ ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡುವುದೇ ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರು ತಮ್ಮ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಪೌರಕಾರ್ಮಿಕರ ಸಂಘದ ರಾಜ್ಯ ಪರಿಷತ್ ಸದಸ್ಯ ಕಾಶಿನಾಥ ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದ ಸೌಂದರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರೂ ಗೌರವ ಹಾಗೂ ಆದರದಿಂದ ಕಾಣಬೇಕು ಎಂದು ಹೇಳಿದರು.

ಪೌರಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಮುತ್ತಣ್ಣ ಭಂಡಾರಿ, ವಾಡಿ ವಲಯ ಕಸಾಪ ಅಧ್ಯಕ್ಷ ಸಿದ್ದಯ್ಯ ಶಾಸ್ತ್ರಿ ನಂದೂರಮಠ, ಮುಖಂಡರಾದ ಬಾಬು ಮಿಯ್ಯಾ, ಬಸವರಾಜ ಪಂಚಾಳ ಹಾಗೂ ಬಸವರಾಜ ಕಾಟಮಳ್ಳಿ ಮಾತನಾಡಿದರು.

ಅಧಿಕಾರಿಗಳಾದ ಪೂಜಾ ಫುಲಾರಿ, ಪುರಸಭೆ ನೌಕರರ ಸಂಘದ ಅಧ್ಯಕ್ಷ ಶಿವಾನಂದ ನಿಂಬರ್ಗಾ, ಜಿಲ್ಲಾ ಪೌರಕಾರ್ಮಿಕರ ಸಂಘದ ಕಾನೂನು ಸಲಹೆಗಾರ ವಿಠ್ಠಲ ಹಾದಿಮನಿ, ಪ್ರಕಾಶ, ಅರುಣಕುಮಾರ, ಈಶ್ವರ ಅಂಬೇಗರ, ಮನೋಜಕುಮಾರ ಹಿರೋಳ್ಳಿ, ಬಸವರಾಜ ಪೂಜಾರಿ, ವಿರುಪಾಕ್ಷಿ ಕೆ., ರೇವಣಸಿದ್ದಪ್ಪ, ಕೃಷ್ಣ ಗಾಯಕ್ವಾಡ್, ಇಬ್ರಾಹಿಂ, ಬಸಮ್ಮ ಪಾಟೀಲ್, ಲತಾಮಣಿ, ರೂಪಾ ಕುಲಕರ್ಣಿ, ವಿಶ್ವನಾಥ ಭಂಡಾರಿ, ಮುಖಂಡರಾದ ಅಮೃತ ಕೋಮಟೆ, ಮಲ್ಲಯ್ಯ ಗುತ್ತೇದಾರ, ಮಹ್ಮದ್ ಗೌಸ್, ನಾಗೇಂದ್ರ ಜೈಗಂಗಾ, ಅಲ್ತಾಫ್ ಸೌಧಾಗರ ಸೇರಿದಂತೆ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು.

ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರ್ಕೂಡ ಸ್ವಾಗತಿಸಿದರು. ಮಲ್ಲಿಕಾರ್ಜುನ ಯಳಸಂಗಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor