Kalaburagi | ತೊಗರಿಗೆ ಎಂಎಸ್‌ಪಿ ಖಾತರಿ ನೀಡಿ: ಶರಣಬಸಪ್ಪ ಮಮಶೆಟ್ಟಿ ಆಗ್ರಹ
ಕಲಬುರಗಿ: ಹೊರದೇಶಗಳಿಂದ ಆಮದಾಗುವ ತೊಗರಿಗೆ ಸೂಕ್ತ ಸುಂಕ ವಿಧಿಸಿ, ದೇಶೀಯ ತೊಗರಿ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಐ (GI) ಟ್ಯಾಗ್ ಪಡೆದ ಕಲಬುರಗಿ ತೊಗರಿ ಬೇಳೆ ವಿದೇಶಕ್ಕೆ ರಫ್ತಾಗುತ್ತಿರುವುದು ಸ್ವಾಗತಾರ್ಹ. ಆದರೆ, ರೈತರಿಗೆ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2026-27ನೇ ಸಾಲಿಗೆ ಕೇಂದ್ರ ಸರ್ಕಾರ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 8,000 ರೂ. ಎಂಎಸ್‌ಪಿ ನಿಗದಿಪಡಿಸಿದ್ದರೂ, ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಸುಮಾರು 60 ರೂ. ರಷ್ಟು ಬೆಲೆ ದೊರೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಎಂಎಸ್‌ಪಿ ಕೇವಲ ಘೋಷಣೆಯಾಗಿ ಉಳಿಯದೆ, ರೈತರಿಗೆ ವಾಸ್ತವವಾಗಿ ದೊರೆಯುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.
2026ರ ಜನವರಿಯಿಂದ ಜೂನ್‌ವರೆಗೆ ಭಾರತ 5.05 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ತೊಗರಿಯನ್ನು ಆಮದು ಮಾಡಿಕೊಂಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಮದು ಪ್ರಮಾಣ ಶೇ.43ರಷ್ಟು ಹೆಚ್ಚಾಗಿದೆ. ಮೊಜಾಂಬಿಕ್, ಮ್ಯಾನ್ಮಾರ್, ಟಾಂಜಾನಿಯಾ ಸೇರಿದಂತೆ ವಿವಿಧ ದೇಶಗಳಿಂದ ತೊಗರಿ ಆಮದಾಗುತ್ತಿದೆ ಎಂದು ಅವರು ತಿಳಿಸಿದರು.
ಒಂದೆಡೆ ತೊಗರಿ ಉತ್ಪಾದನೆ ಹೆಚ್ಚಿಸಲು ರೈತರನ್ನು ಪ್ರೋತ್ಸಾಹಿಸಿ, ಮತ್ತೊಂದೆಡೆ ಪರಿಣಾಮಕಾರಿ ಬೆಲೆ ರಕ್ಷಣೆಯಿಲ್ಲದೆ ವಿದೇಶಿ ತೊಗರಿಯೊಂದಿಗೆ ಸ್ಪರ್ಧೆಗೆ ತಳ್ಳುವುದು ಸರಿಯಾದ ಕೃಷಿ ನೀತಿಯಲ್ಲ. ರೈತರಿಗೆ ಎಂಎಸ್‌ಪಿಗೆ ಕಾನೂನುಬದ್ಧ ಖಾತರಿ ನೀಡಬೇಕು ಎಂದು ಒತ್ತಾಯಿಸಿದರು.
‘ಕಲಬುರಗಿ ತೊಗರಿಗೆ ಜಾಗತಿಕ ಮಾರುಕಟ್ಟೆ ಬೇಕು; ಈ ಭಾಗದ ರೈತರಿಗೆ ತಮ್ಮ ನೆಲದಲ್ಲೇ ಬೆಲೆ ಭದ್ರತೆ ಬೇಕು’ ಎಂದು ಸರ್ಕಾರಕ್ಕೆ ಒತ್ತಡ ಹೇರಿದರು.
ಸುದ್ದಿಗೋಷ್ಠಿಯಲ್ಲಿ ದಿಲೀಪ್ ನಾಗೂರೆ, ದೇವು ಬಿರಾದಾರ, ಕರೆಪ್ಪಾ ಕರಗೊಂಡ, ಸಿದ್ದು ಎಸ್.ಎಲ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.