ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ–1ರ ಕಲಬುರಗಿ ಘಟಕ–1ರಿಂದ ಕಲಬುರಗಿ–ಬೆಂಗಳೂರು ನಡುವೆ ಎರಡು ನೂತನ ಎಸಿ ಎಕ್ಸಿಕ್ಯೂಟಿವ್ ಸೆಮಿ ಸ್ಲೀಪರ್ ಬಸ್‌ಗಳ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಪ್ರಯಾಣಿಕರು ಈ ಬಸ್‌ಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಮೊದಲ ಎಸಿ ಎಕ್ಸಿಕ್ಯೂಟಿವ್ ಸೆಮಿ ಸ್ಲೀಪರ್ ಬಸ್ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.15ಕ್ಕೆ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ಅದೇ ರೀತಿ ಬೆಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 6.15ಕ್ಕೆ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಕಲಬುರಗಿ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.

ಈ ಬಸ್ ಜೇವರ್ಗಿ, ಶಹಾಪುರ, ಲಿಂಗಸೂಗೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು ಹಾಗೂ ತುಮಕೂರು ಮಾರ್ಗವಾಗಿ ಸಂಚರಿಸಲಿದೆ.

ಇನ್ನೊಂದು ಎಸಿ ಎಕ್ಸಿಕ್ಯೂಟಿವ್ ಸೆಮಿ ಸ್ಲೀಪರ್ ಬಸ್ ಕಲಬುರಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7.15ಕ್ಕೆ ಹೊರಟು ಅದೇ ದಿನ ರಾತ್ರಿ 9.30ಕ್ಕೆ ಬೆಂಗಳೂರಿಗೆ ತಲುಪಲಿದೆ. ಅದೇ ರೀತಿ ಬೆಂಗಳೂರಿನಿಂದ ಬೆಳಿಗ್ಗೆ 7.15ಕ್ಕೆ ಹೊರಟು ಅದೇ ದಿನ ರಾತ್ರಿ 9.30ಕ್ಕೆ ಕಲಬುರಗಿಗೆ ಆಗಮಿಸಲಿದೆ.

ಈ ಬಸ್ ಜೇವರ್ಗಿ, ಶಹಾಪುರ, ಲಿಂಗಸೂಗೂರು, ಸಿಂಧನೂರು, ಗಂಗಾವತಿ, ಹೊಸಪೇಟೆ, ಕೂಡ್ಲಿಗಿ, ಚಿತ್ರದುರ್ಗ, ಹಿರಿಯೂರು ಹಾಗೂ ತುಮಕೂರು ಮಾರ್ಗವಾಗಿ ಸಂಚರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor