Kalaburagi | ಎಸ್‌ಐಆರ್ ನಿಲ್ಲಿಸುವಂತೆ ಆಗ್ರಹಿಸಿ ಅ.2ರಂದು ಧರಣಿ ಸತ್ಯಾಗ್ರಹ : ಡಾ.ಮಹೇಶಕುಮಾರ ರಾಠೋಡ
ಕಲಬುರಗಿ: ಎಸ್‌ಐಆರ್ ಪ್ರಕ್ರಿಯೆ ನಿಲ್ಲಿಸಿ, ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾದವರ ಮತದಾನದ ಹಕ್ಕು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಅ.2ರಂದು ಜಗತ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನಾಗರಿಕರ ಹಕ್ಕುಗಳ ರಕ್ಷಣಾ ಆಂದೋಲನದ ಸಂಚಾಲಕ ಡಾ. ಮಹೇಶಕುಮಾರ ರಾಠೋಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು. ಚುನಾವಣಾ ಆಯೋಗದ ಸ್ವತಂತ್ರ ಹಾಗೂ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಮರುಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗದ ಮೂವರು ಆಯುಕ್ತರಲ್ಲಿ ಇಬ್ಬರು ವಿವಿಧ ನಿರ್ಧಾರಗಳ ಕುರಿತು ಆಕ್ಷೇಪ ದಾಖಲಿಸಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಈ ಬೆಳವಣಿಗೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಾಠೋಡ ಹೇಳಿದರು.
ಅ.2ರಂದು ಬೆಳಗ್ಗೆ 11.30ಕ್ಕೆ ಜಗತ್ ವೃತ್ತದಲ್ಲಿ ಧರಣಿ ಆರಂಭವಾಗಲಿದೆ. ಮಧ್ಯಾಹ್ನ 2.30ಕ್ಕೆ ಸೂಪರ್ ಮಾರ್ಕೆಟ್‌ನಿಂದ ಜಗತ್ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು. ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಅಫಝಲ್ ಮಹಿಮೂದ್, ಸಲೀಂ ಅಹಮದ್ ಚಿತಾಪೂರಿ, ಮಹೇಶ ಎಸ್.ಬಿ., ಶರಣಬಸಪ್ಪ ಮಮಶೆಟ್ಟಿ, ಎಸ್.ಎಂ. ಶರ್ಮಾ, ಮುಬೀನ್ ಅಹಮದ್, ಸಂಧ್ಯಾರಾಜ್ ಸ್ಯಾಮ್ಯುಯೆಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.