ಕಲಬುರಗಿ: ಸುಲಿಗೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧನ
ಇಮ್ತಿಯಾಜ್ ಮಕ್ಖುಲ್ ಗಿಣಿ
ಕಲಬುರಗಿ: ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ವೈಷ್ಣೋದೇವಿ ಮಂದಿರದ ಹತ್ತಿರ ಸುಲಿಗೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಇಲ್ಲಿನ ರಿಂಗ್ ರಸ್ತೆಯ ಜಾಫರಾಬಾದ್ ಕ್ರಾಸ್ ಸಮೀಪ ಮಂಗಳವಾರ ಸಂಜೆ ಜರುಗಿದೆ.
ಇಮ್ತಿಯಾಜ್ ಮಕ್ಖುಲ್ ಗಿಣಿ(28) ಪೊಲೀಸರ ಗುಂಡೇಟಿಗೆ ಗಾಯಗೊಂಡಿರುವ ರೌಡಿಶೀಟರ್ ಆಗಿದ್ದಾನೆ. ಸದರಿ ಪ್ರಕರಣದಲ್ಲಿ 3 ಜನ ಆರೋಪಿತರನ್ನು ಈಗಾಗಲೇ ಬಂಧಿಸಲಾಗಿದೆ. ಮತ್ತಷ್ಟು ತನಿಖೆಯ ನಂತರ ಹಣ್ಣಿನ ವ್ಯಾಪಾರಿ ಇಮ್ತಿಯಾಜ್ 4ನೇ ಆರೋಪಿಯಾಗಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಜಾಫರಾಬಾದ್ ಕ್ರಾಸ್ ಬಳಿ ವಶಕ್ಕೆ ಪಡೆದುಕೊಳ್ಳುವಾಗ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಬಸವರಾಜ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ವಿರುದ್ಧ ಕಲಬುರಗಿ ನಗರ ಹಾಗೂ ಹೈದ್ರಾಬಾದ ವಿವಿಧ ಕಡೆಗಳಲ್ಲಿ ಕೊಲೆಗೆ ಯತ್ನ, ಹಲ್ಲೆ, ಸುಲಿಗೆ ಸೇರಿದಂತೆ ಒಟ್ಟು 10 ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.