ಕಲಬುರಗಿ| ಸುಲಿಗೆ ಪ್ರಕರಣ: ಬಾಲಕ ಸೇರಿ ಐವರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
ಕಲಬುರಗಿ: ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ನಾಲ್ಕು ಜನ ಸೇರಿಕೊಂಡು ಬಂಗಾರ, ನಗದು ಹಣ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಠಾಣೆಯ ಪೊಲೀಸರು ಬಾಲಕ ಸಹಿತ ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಲಿಗೆಗೈದ ಸ್ವತ್ತು, ಆಟೋ ರಿಕ್ಷಾ ಹಾಗೂ ಒಂದು ಚಾಕುವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಹಮಾಲ್ ಕಾಲೋನಿಯ ನಿವಾಸಿಗಳಾದ ಸಿದ್ದರೂಢ ಕಲ್ಯಾಣರಾವ್ ಆಲಗೂಡ, ಜಯಪ್ರಕಾಶ ರಮೇಶ್ ದೇವದುರ್ಗ, ಅಖಿಲೇಶ್ ಶಿವಾನಂದ ನಾಟೀಕರ್, ಕಮಲನಗರ ನಿವಾಸಿ ಮಹೇಶ್ ವೆಂಕಟ ಜಾನೇಕರ್ ಸೇರಿದಂತೆ ಓರ್ವ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರುಣೇಶ್ವರ ನಗರದ ಪರಶುರಾಮ ರಾಮಚಂದ್ರ ವಾಸ್ಟರ್ ಎಂಬವರು ನ್ಯೂ ಜೇವರ್ಗಿ ಬ್ರಿಡ್ಜ್ ಹತ್ತಿರ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ರಿಕ್ಷಾ ಚಾಲಕ ಹಾಗೂ ನಾಲ್ಕು ಮಂದಿ ಒಟ್ಟು 13 ಗ್ರಾಂ.ನ ಎರಡು ಬಂಗಾರದ ರಿಂಗ್ ಸೇರಿದಂತೆ ನಗದು 3 ಸಾವಿರ ರೂ. ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕನ ಸಹಿತ ಐವರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆಗೈದ 8 ಗ್ರಾಂ. ಬಂಗಾರದ ಉಂಗುರ, ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣವೊಂದರ 10 ಗ್ರಾಂ. ಚಿನ್ನದ ಸರವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.