×
Ad

ಅತಿವೃಷ್ಟಿಯಿಂದ ರೈತರ ಬೆಳೆ ಹಾನಿ | ಪರಿಹಾರಕ್ಕಾಗಿ 90 ಕೋಟಿ ರೂ. ಬೇಡಿಕೆ : ಸಮದ್ ಪಟೇಲ್

Update: 2025-09-25 19:22 IST

ಕಲಬುರಗಿ : ಜಿಲ್ಲೆಯ ನೆಲದ ಒಳಪದರದಲ್ಲಿ ಸುಣ್ಣದ ಕಲ್ಲು ಇರುವುದರಿಂದ ಹೆಚ್ಚಿನ ನೀರು ಮಣ್ಣಿಗೆ ಅಪಾಯಕಾರಿಯಾಗಿದೆ. ಇದರ ಪರಿಣಾಮವಾಗಿ ತೊಗರಿ, ಹತ್ತಿ ಹಾಗೂ ಇತರೆ ಬೆಳೆಗಳು ಹಾನಿಗೀಡಾಗುತ್ತಿರುವುದಾಗಿ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, “ಕಲಬುರಗಿ ಜಿಲ್ಲೆಯಲ್ಲಿ ಜನವರಿ–ಸೆಪ್ಟೆಂಬರ್ 2025ರ ನಡುವೆ 609 ಮಿ.ಮೀ ಮಳೆಯಾಗಬೇಕಾಗಿದ್ದರೂ, 900 ಮಿ.ಮೀ ಮಳೆಯಾಗಿದೆ. ಅಂದರೆ ಶೇಕಡಾ 48ರಷ್ಟು ಹೆಚ್ಚಾಗಿದೆ. ನಿರಂತರ ಮಳೆಯಿಂದ ಹೊಲಗಳಲ್ಲಿ ನೀರು ನಿಂತು ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗಿವೆ” ಎಂದರು.

ಈವರೆಗೆ ನಡೆದ ಸಮೀಕ್ಷೆಯಲ್ಲಿ 1,05,852 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದಕ್ಕೆ 90 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸೆಪ್ಟೆಂಬರ್ ಸಮೀಕ್ಷೆಯ ಬಳಿಕ ಹಾನಿ ಪ್ರಮಾಣ ಹಾಗೂ ಪರಿಹಾರ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ರಸಗೊಬ್ಬರ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಪಟೇಲ್, ಹಿಂಗಾರು ಬಿತ್ತನೆಗಾಗಿ 5,000 ಟನ್ ಯೂರಿಯಾ ಮತ್ತು 5,000 ಟನ್ ಡಿ.ಎ.ಪಿ ಒದಗಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಕೃಷಿ ವಿಜ್ಞಾನಿ ಡಾ. ರಾಜು ತೆಗ್ಗೆಳ್ಳಿ ರೈತರಿಗೆ ಸಲಹೆ ನೀಡುತ್ತಾ, “ನೀರಿನ ತೊಟ್ಟಿಲುಗಳನ್ನು (ಬೋದು) ಮಾಡುವುದು, ನೀರು ಹರಿಯುವ ಮಾರ್ಗ ವ್ಯವಸ್ಥೆ ಕಲ್ಪಿಸುವುದು ಬೆಳೆಗಳನ್ನು ಉಳಿಸಲು ಉತ್ತಮ ಕ್ರಮ. ತೊಗರಿಯ ಹಳದಿ ರೋಗಕ್ಕೆ ಯೂರಿಯಾ ಸಿಂಪರಣೆ ಉಪಯುಕ್ತ. ಪಕ್ಷಿಗಳನ್ನು ಆಕರ್ಷಿಸುವ ಬಲೆಗಳ ಮೂಲಕ ಹುಳ ನಿಯಂತ್ರಣ ಸಾಧ್ಯ. ಅಗತ್ಯವಿದ್ದಲ್ಲಿ ಶೇ.50 ರಿಯಾಯಿತಿಯಲ್ಲಿ ಲಭ್ಯವಿರುವ ಕೀಟನಾಶಕಗಳನ್ನು ಬಳಸಬಹುದು” ಎಂದರು.

ಇದೇ ವೇಳೆ, ಹಿಂಗಾರು ಹಂಗಾಮನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 3ರಿಂದ 18ರವರೆಗೆ “ವಿಕಸಿತ ಕೃಷಿ ಸಂಕಲ್ಪ ಅಭಿಯಾನ” ಜಿಲ್ಲೆಯಲ್ಲಿ ನಡೆಯಲಿದೆ ಎಂದು ಪಟೇಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News