×
Ad

ಕಲಬುರಗಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣ: ಮಹಬೂಬ ಪಾಷಾ

Update: 2025-12-20 22:34 IST

ಕಲಬುರಗಿ: ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ಹಾಗೂ ಕನ್ನಡ ಭಾಷೆ ಬೆಳವಣಿಗೆ ಪೂರಕವಾಗಿ ಕಲಬುರಗಿ-ಹುಬ್ಬಳ್ಳಿಯಲ್ಲಿ ಫಿಲ್ಮ್ ಸಿಟಿ ಸ್ಥಾಪನೆಯ ಪ್ರಸ್ತಾಪವಿದೆ ಎಂದು ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ ಪಾಷಾ ತಿಳಿಸಿದರು.

ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ಭೂಮಿಗಾಗಿ ಈಗಾಗಲೇ ಕಲಬುರಗಿ ಜಿಲ್ಲಾಡಳಿಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಟ 50 ಎಕರೆ ಭೂಮಿಯಾದರೂ ಜಮೀನು ಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭೂಮಿ ದೊರಕುವ ವಿಶ್ವಾಸವಿದೆ ಎಂದರು.

ಬೆಂಗಳೂರಿನ ಶ್ರೀಕಂಠೀರವ ಸ್ಟುಡಿಯೋಸ್ ಮಾದರಿಯಲ್ಲೇ ಸಣ್ಣದಾದ ಫಿಲ್ಮ್ ಸಿಟಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ನಮ್ಮ ಯೋಜನೆಯಾಗಿದೆ. ಅದೇ ತೆರನಾಗಿ ವಿಜಯನಗರ, ಚಿತ್ರದುರ್ಗ ಹಾಗೂ ಶಿವಮೊಗ್ಗದಲ್ಲಿ ಸ್ಟುಡಿಯೋ ಸಹ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಹಬೂಬ ಪಾಷ ವಿವರಣೆ ನೀಡಿದರು.

ಫಿಲ್ಮ್ ಸಿಟಿ ಹಾಗೂ ಸ್ಟುಡಿಯೋ ಸ್ಥಾಪನೆಯಿಂದ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಜತೆಗೆ ವ್ಯಾಪಾರ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಭಾಷೆ ಉಳಿಸಿ ಬೆಳೆಸುವ ಪ್ರಮುಖ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಜನವರಿಯಲ್ಲಿ ಓಟಿಟಿ ಜಾರಿಗೆ :

ಸ್ಥಳೀಯ ಕಲೆ, ಸಾಹಿತ್ಯ ಅಭಿರುಚಿಯ ಚಿತ್ರಗಳು, ಕಿರುಚಿತ್ರಗಳನ್ನು ಜಾಗತೀಕವಾಗಿ ಪರಿಚಯಿಸುವ ಉದ್ದೇಶದಿಂದ 2025-26ನೇ ಸಾಲಿನ ಆಯವ್ಯಯದಲ್ಲಿ ಓ.ಟಿ.ಟಿ.(ಓವರ್ ದಿ ಟಾಪ್) ಜಾರಿಗೆ ಘೋಷಿಸಲಾಗಿದ್ದು, ಬರುವ ಜನವರಿ ಮಾಸಾಂತ್ಯ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಇದು ಜಾರಿಯಾಗಲಿದೆ. ಈಗಾಗಲೆ ಕೇರಳ, ಕೇಂದ್ರ ಸರ್ಕಾರ ಓ.ಟಿ.ಟಿ. ಜಾರಿಗೊಳಿಸಿದ್ದು, ರಾಜ್ಯದಲ್ಲಿ ಜಾರಿಗೆ ಬಂದಲ್ಲಿ ಅದು ಮೂರನೇ ಸರ್ಕಾರಿ ಓ.ಟಿ.ಟಿ. ಪ್ಲಾಟಫಾರ್ಮ್ ಆಗಿರಲಿದೆ. ಈಗಾಗಲೇ ಈ ಸಂಬಂಧ ಎರಡ್ಮೂರು ಮಹತ್ವದ ಸಭೆ ನಡೆದಿದೆ ಎಂದು ಮಹಬೂಬ ಪಾಷಾ ತಿಳಿಸಿದರು.

ಡಿ.ಸಿ.ಗೆ ಪ್ರಸ್ತಾವನೆ ಸಲ್ಲಿಕೆ :

ಇದಕ್ಕೂ ಮೊದಲು ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ ಪಾಷಾ ಅವರು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರನ್ನು ಭೇಟಿ ಮಾಡಿ ಕಲಬುರಗಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕನಿಷ್ಠ 50 ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News